ಸೋಮವಾರಪೇಟೆ, ಏ. 15: ನಬಾರ್ಡ್, ಓ.ಡಿ.ಪಿ. ಮೈಸೂರು, ನಿಸರ್ಗ ಕಾವೇರಿ ಜಲಾನಯನ ಸಮಿತಿ ವತಿಯಿಂದ ಸುಸ್ಥಿರ ಬೇಸಾಯ ಯೋಜನೆಯಡಿ ಕಾಳುಮೆಣಸು ಕೃಷಿಯ ನಿರ್ವಹಣೆಯ ಬಗ್ಗೆ ಮಸಗೋಡು ಗ್ರಾಮದಲ್ಲಿ ರೈತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಮಸಗೋಡು ಗ್ರಾಮದ ಎಂ.ಟಿ. ಲೋಕೇಶ್ ಅವರ ಕಾಳುಮೆಣಸು ತೋಟದಲ್ಲಿ ನಡೆದ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ. ಗಣೇಶ್ ಮೂರ್ತಿ ಉದ್ಘಾಟಿಸಿದರು.
ಕಾಳುಮೆಣಸು ಕೃಷಿಯಲ್ಲಿ ಮಣ್ಣಿನ ಆರೋಗ್ಯ, ಸುಧಾರಿತ ತಳಿಯ ಆಯ್ಕೆ ಹಾಗೂ ನೀರಿನ ಸೌಲಭ್ಯ ಬಹಳ ಪ್ರಮುಖವಾದುದು. ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆಗಳನ್ನು ಪಡೆದು ಕೃಷಿ ಮಾಡಿದರೆ, ಅಧಿಕ ಇಳುವರಿ ಯೊಂದಿಗೆ ಲಾಭ ಪಡೆಯಬಹುದು ಎಂದು ಹೇಳಿದರು.
ಕಾಳುಮೆಣಸು ಬಳ್ಳಿಗಳಿಗೆ ರೋಗ ಹರಡದಂತೆ ಎಚ್ಚರ ವಹಿಸಬೇಕು. ಕೀಟನಾಶಕಗಳನ್ನು ಸಿಂಪಡಿಸುವಾಗ ತಜ್ಞರ ಸಲಹೆ ಅಗತ್ಯ. ಕಾಳುಮೆಣಸು ಬೆಳೆಯಲು ಸೋಮವಾರಪೇಟೆ ತಾಲೂಕಿನ ಮಣ್ಣು ಸೂಕ್ತವಾಗಿದ್ದು, ತಜ್ಞರ ಸಲಹೆಯನ್ನು ಪಡೆದು ಕೃಷಿ ಕೈಗೊಂಡರೆ ರೈತರು ನಷ್ಟಕ್ಕೆ ಒಳಗಾಗುವದಿಲ್ಲ ಎಂದರು.
ಮಸಗೋಡು ಜಲಾನಯನ ಸಮಿತಿ ಅಧ್ಯಕ್ಷ ಲೋಕೇಶ್, ಹಾನಗಲ್ಲು ಸಮಿತಿ ಅಧ್ಯಕ್ಷ ರಾಜು ಪೊನ್ನಪ್ಪ, ಚಿಕ್ಕಬ್ಬೂರು ಸಮಿತಿ ಅಧ್ಯಕ್ಷ ತಿಮ್ಮಯ್ಯ, ಯೋಜನಾ ಸಂಯೋಜಕಿ ಅಣ್ಣಮ್ಮ, ಕ್ಷೇತ್ರಾಧಿಕಾರಿ ಭುವನೇಶ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.