ಮಡಿಕೇರಿ, ಏ. 15: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹಿಂದೆ ಟಿಪ್ಪು ಸುಲ್ತಾನ್‍ನಿಂದ ಹತ್ಯೆಗೀಡಾದ ಬಲಿದಾನಿಗಳಿಗೆ ತಾ. 13 ರಂದು ದೇವಟ್‍ಪರಂಬುವಿನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ದೇವಟ್‍ಪರಂಬು ಹತ್ಯಾಕಾಂಡಕ್ಕಾಗಿ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಕಲಿಯಂಡ ಪ್ರಕಾಶ್, ನಂದಿನೆರವಂಡ ರೇಖಾ ನಾಚಪ್ಪ, ಅರೆಯಡ ಗಿರೀಶ್, ಚಂಬಂಡ ಜತನ್ ಮೊದಲಾದವರು ಪಾಲ್ಗೊಂಡು ಸಿ.ಎನ್.ಸಿ. ವತಿಯಿಂದ ಹುತಾತ್ಮ ಕೊಡವರ ಆತ್ಮಗಳಿಗೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.

ಕಾಲೇಜು ವಾರ್ಷಿಕೋತ್ಸವ

ಕುಶಾಲನಗರ. ಏ. 15: ಕುಶಾಲನಗರದ ಮಹಾತ್ಮಾಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಂ ಕೇವಳ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಕೂಡ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕಿದೆ. ಸುಂದರ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಂ.ನಾಗೇಶ್, ಕಾಲೇಜು ಪ್ರಾಂಶುಪಾಲ ಎಂ.ಎ.ಅವಿನಾಶ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.

ಕಾಡಾನೆ ಹಾವಳಿ ತಡೆಗೆ ಸಭೆ

ಕೂಡಿಗೆ, ಏ. 15: ಕೂಡಿಗೆ ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳ ಹಾವಳಿ ತಡೆಗಟ್ಟುವ ಬಗ್ಗೆ ಕಾಡಂಚಿನ ಗ್ರಾಮಗಳ ರೈತರೊಂದಿಗೆ ರೈತ ಸಂಪರ್ಕ ಸಭೆ ಅಬ್ಬೂರುಕಟ್ಟೆಯ ಚರ್ಚ್ ಹಾಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ವಹಿಸಿದ್ದರು.

ಸಭೆಯಲ್ಲಿ ರೈತರುಗಳಾದ ಅನಂತರಾಮು, ರಾಮಣ್ಣ, ರಾಮಚಂದ್ರ ಸೇರಿದಂತೆ ಕಾಡಂಚಿನ ಗ್ರಾಮಗಳಾದ ಆಡಿನಾಡೂರು, ಮೋರಿಕಲ್ಲು, ಬಸವನಹಳ್ಳಿ, ಹೆರೆಯೂರು, ಅಬ್ಬೂರುಕಟ್ಟೆ ಮತ್ತಿತರ ಗ್ರಾಮಗಳ ನೂರಾರು ರೈತರು ಕಾಡಾನೆಗಳ ಹಾವಳಿ ಬಗ್ಗೆ ಸಂಕಷ್ಟಗಳನ್ನು ತಿಳಿಸಿದರು. ಅಲ್ಲದೆ ಅರಣ್ಯ ಇಲಾಖೆಯಿಂದ ಕೈಗೊಳ್ಳಬಹುದಾದ ವಿಷಯಗಳ ಬಗ್ಗೆ ಸಲಹೆ - ಸೂಚನೆಗಳನ್ನು ನೀಡಿದರು.

ಮೊದಲಿಗೆ, ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಮಾಡಬೇಕು, ಅಲ್ಲದೆ ಅಡಿನಾಡೂರು ಗೇಟಿನಿಂದ ಮಾಲಂಬಿ ಮೀಸಲು ಅರಣ್ಯದವರೆಗೆ 4. ಕಿ.ಮೀ. ಆನೆ ಕಂದಕಗಳನ್ನು ತೆಗೆಯಬೇಕು, ಕಾಡಿನ ಒಳಗೆ ಆನೆಗಳಿಗೆ ಬೇಕಾಗುವಂತಹ ಸಸ್ಯಗಳನ್ನು ಬೆಳೆಸಬೇಕು. ಅಲ್ಲದೆ ಹೆಚ್ಚು ಕಾಡಾನೆಗಳು ದಾಟುವ ಜಾಗದಲ್ಲಿ ಹೊಸ ಮಾದರಿಯ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬಹುದು ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸೋಮವಾರಪೇಟೆ ವಲಯ ಅರಣ್ಯಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಹಂತ ಹಂತವಾಗಿ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭ ಗಣಗೂರು ಗ್ರಾ.ಪಂ. ಉಪಾಧ್ಯಕ್ಷ ವಿರೂಪಾಕ್ಷ ಸೇರಿದಂತೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.