ಮಡಿಕೇರಿ, ಏ. 15: ಉನ್ನಾವೋ ಹಾಗೂ ಕಥುವಾದಲ್ಲಿ ಅಪ್ರಾಪ್ತರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿರುವ ಜಾತ್ಯತೀತ ಜನತಾದಳದ ಪ್ರಚಾರ ಸಮಿತಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯರ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ರಕ್ಷಣೆಯನ್ನು ನೀಡಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉನ್ನಾವೋ ಮತ್ತು ಕಥುವಾದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದರು.
ನಾಳೆ ಜೆಡಿಎಸ್ ಸಮಾವೇಶ
ಜಿಲ್ಲಾ ಜೆಡಿಎಸ್ ವತಿಯಿಂದ ತಾ. 17 ರಂದು (ನಾಳೆ) ವೀರಾಜಪೇಟೆ ಹಾಗೂ ಕುಶಾಲನಗರದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ವೀರಾಜಪೇಟೆಯ ಗಡಿಯಾರ ಕಂಬದ ಬಳಿಯಿಂದ ತಾಲೂಕು ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕುಶಾಲನಗರದ ಗಡಿಭಾಗ ಕೊಪ್ಪದಿಂದ ಎಸ್ಎಲ್ಎನ್ ಮೈದಾನದವರೆಗೆ ‘ವಿಕಾಸ ಪರ್ವ’ ಯಾತ್ರೆ ನಡೆಯಲಿದೆ. ಮುಖಂಡರಾದ ಜಿ.ಟಿ. ದೇವೇಗೌಡ, ಹೆಚ್. ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಂ. ಗಣೇಶ್ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್ ಗೌಡ, ನಗರ ಜೆಡಿಎಸ್ ಅಧ್ಯಕ್ಷ ಬಿ.ವೈ. ರಾಜೇಶ್, ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಕೃಷ್ಣಪ್ಪ ಹಾಗೂ ಮಹಿಳಾ ಘಟಕದ ಮಡಿಕೇರಿ ತಾಲೂಕು ಅಧ್ಯಕ್ಷೆ ಲೀಲಾ ಶೇಷಮ್ಮ ಉಪಸ್ಥಿತರಿದ್ದರು.