ಮಡಿಕೇರಿ, ಏ. 15: ಯುವಜನತೆಗೆ ಉದ್ಯೋಗ ದೊರಕಿಸಿ ಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿ ಸೂಕ್ತ ಭರವಸೆ ನೀಡುವ ರಾಜಕೀಯ ಪಕ್ಷಗಳಿಗೆ ಮಾತ್ರ ನಮ್ಮ ಮತ ಎಂದು “ಉದ್ಯೋಗಕ್ಕಾಗಿ ಯುವಜನರು” ಆಂದೋಲನದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ಜಿಲ್ಲಾ ಸಂಚಾಲಕಿ ಪುಷ್ಪಾಲತಾ, “ಉದ್ಯೋಗಕ್ಕಾಗಿ ಯುವಜನರು” ಆಂದೋಲನ ಸಮಿತಿ ಮೂಲಕ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಒಪ್ಪುವ ಪಕ್ಷಕ್ಕೆ ಮಾತ್ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮತ ಬೀಳಲಿದೆ ಎಂದು ಹೇಳಿದರು.

ವಿವಿಧ ಪಕ್ಷಗಳು ಆರೋಪ ಪ್ರತ್ಯಾರೋಪಗಳೇ ಕಾಲಹರಣ ಮಾಡುತ್ತಿವೆ ಹೊರತು ಅಭಿವೃದ್ಧಿಗೆ ಪೂರಕವಾದ ಯಾವದೇ ಭರವಸೆಗಳನ್ನು ನೀಡುತ್ತಿಲ್ಲ. ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ನಿರುದ್ಯೋಗದ ಪರಿಹಾರಕ್ಕಾಗಿ ರಾಜ್ಯದಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳ ಗಮನ ಸೆಳೆಯುವದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಯುವ ಸಮೂಹವನ್ನು ಒಗ್ಗೂಡಿಸಿ ಆಂದೋಲನ ನಡೆಸುವ ಮೂಲಕ ಉದ್ಯೋಗದ ಬೇಡಿಕೆಗಳನ್ನು ಪಕ್ಷಗಳ ಮುಂದೆ ಇಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪುಷ್ಪಲತಾ ತಿಳಿಸಿದರು.

ಜಿಲ್ಲಾ ಸಂಚಾಲಕ ರಜನಿಕಾಂತ್ ಮಾತನಾಡಿ, ‘ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೊದಲೇ ನಮ್ಮ ಆಂದೋಲನದ ಯುವಕರು 10 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಆದರೆ, ಈ ಅಂಶಗಳನ್ನು ಯಾವದೇ ಪಕ್ಷದ ಮುಖಂಡರು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ “ಉದ್ಯೋಗಕ್ಕಾಗಿ ಯುವಜನರು” ಆಂದೋಲನದ ವತಿಯಿಂದ ಯುವಜನರ ಪ್ರಣಾಳಿಕೆ ಬಿಡುಗಡೆ ಹಾಗೂ “ಸುಭದ್ರ ಉದ್ಯೋಗಕ್ಕೇ ನಮ್ಮ ಓಟು” ಸಂದೇಶ ಸಾರುವ ಭಿತ್ತಿ ಪತ್ರಗಳನ್ನು ಪ್ರಮುಖರು ಬಿಡುಗಡೆಗೊಳಿಸಿದರು. ಗೋಷ್ಠಿಯಲ್ಲಿ ಆಂದೋಲನದ ಪದಾಧಿಕಾರಿಗಳಾದ ಪವನ್ ಕುಮಾರ್, ಯಶೋಧ ಹಾಗೂ ಅನಿತಾ ಉಪಸ್ಥಿತರಿದ್ದರು.