ಸೋಮವಾರಪೇಟೆ, ಏ. 15: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ಅಂತರ್ರಾಷ್ಟೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಅವರ ತಂದೆ ದಿ. ವಿಠಲಾಚಾರ್ಯ ಸ್ಮಾರಕ ಜಿಲ್ಲಾಮಟ್ಟದ ಆಹ್ವಾನಿತ ತÀಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಫೈನಲ್ ಹಣಾಹಣಿಗೆ ವರುಣನ ಆಗಮನವಾದ ಹಿನ್ನೆಲೆ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳಿಗೆ ಜಂಟಿ ಬಹುಮಾನ ವಿತರಿಸಲಾಯಿತು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಫೈನಲ್ ಪಂದ್ಯದ ಪ್ರಥಮಾರ್ಧದಲ್ಲಿ ಆತಿಥೇಯ ಡಾಲ್ಪೀನ್ಸ್ ತಂಡವು ಕೂಡಿಗೆಯ ಕ್ರೀಡಾಶಾಲೆ ತಂಡದ ವಿರುದ್ಧ ಮೂರು ಗೋಲುಗಳನ್ನು ದಾಖಲಿಸಿ ಮುನ್ನಡೆ ಸಾಧಿಸಿತ್ತು.
ಡಾಲ್ಪೀನ್ಸ್ ತಂಡದ ಭರವಸೆಯ ಮುನ್ನಡೆ ಆಟಗಾರ ಆಭರಣ್ ಪ್ರಥಮವಾಗಿ ಫೀಲ್ಡ್ ಗೋಲ್ ದಾಖಲಿಸಿದರು. ನಂತರ ತಂಡಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕ್‍ನಲ್ಲಿ ಗೋಲು ದಾಖಲಿಸುವ ಮೂಲಕ 2-0 ಮುನ್ನಡೆ ಕಾಯ್ದುಕೊಂಡರು. ತರುವಾಯ ಕೆಲವೇ ನಿಮಿಷಗಳಲ್ಲಿ ತಂಡದ ಆಟಗಾರ ಕಾಳಿಮುತ್ತು ಮೂರನೇ ಗೋಲು ಬಾರಿಸುವ ಮೂಲಕ ತಂಡಕ್ಕೆ 3-0 ಮುನ್ನಡೆ ಒದಗಿಸಿದರು.
ಪ್ರಥಮಾರ್ಧ ಮುಗಿಯುವ ವೇಳೆಗೆ ಸುರಿದ ಭಾರಿ ಮಳೆಯಿಂದಾಗಿ ಆಟವನ್ನು ಸ್ಥಗಿತಗೊಳಿಸಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಮೈದಾನದಲ್ಲಿ ನೀರು ನಿಂತ ಹಿನ್ನೆಲೆ, ಆಟವನ್ನು ಸ್ಥಗಿತಗೊಳಿಸಿ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.
ನಂತರ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಕ್ರೀಡಾಕೂಟದ ಪ್ರಮುಖ ಪ್ರಾಯೋಜಕ ಅಂತರ್ರಾಷ್ಟ್ರೀಯ ಆಟಗಾರ ಎಸ್.ವಿ. ಸುನಿಲ್ ಅವರ ಪತ್ನಿ ನಿಶಾ ಸುನಿಲ್ ಸೇರಿದಂತೆ ಭಾರತ ಹಾಕಿ ತಂಡದ ಆಟಗಾರರಾದ ವಿ.ಆರ್. ರಘುನಾಥ್, ವಿಕ್ರಂಕಾಂತ್, ರೋಷನ್ ಮಿನ್ಜ್, ವಿಕಾಶ್ ಶರ್ಮ, ನಿತಿನ್ ಕುಮಾರ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್ ಅವರುಗಳು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್. ಅಶೋಕ್ ಮಾತನಾಡಿ, ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 4 ವರ್ಷಗಳಿಂದ ಕ್ರೀಡಾಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ. ಸೋಮವಾರಪೇಟೆಯ ಮೈದಾನದಲ್ಲಿ ಆಟವಾಡಿದ ಅನೇಕ ಹಾಕಿಪಟುಗಳು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಾಕಿ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಪಂದ್ಯಾವಳಿಯಲ್ಲಿ ಎದುರಾಳಿ ತಂಡವಾದ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ವಿರುದ್ದ 3 ಗೋಲು ಗಳಿಸಿದ ಹಿನ್ನೆಲೆ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್‍ಗೆ ಪ್ರಥಮ ಬಹುಮಾನದ ಟ್ರೋಫಿ ನೀಡಲಾಯಿತು. ದ್ವಿತೀಯ ಟ್ರೋಫಿಯನ್ನು ಕೂಡಿಗೆ ತಂಡ ಪಡೆಯಿತು. ಪಂದ್ಯಾಟದ ಪ್ರಥಮ ನಗದು ಬಹುಮಾನ (50 ಸಾವಿರ) ಮತ್ತು ದ್ವಿತೀಯ ಬಹುಮಾನ (30 ಸಾವಿರ) ನಗದನ್ನು ಇತ್ತಂಡಗಳಿಗೆ ಸಮನಾಗಿ ವಿತರಿಸಲಾಯಿತು.
ಪಂದ್ಯಾಟದ ಮಿಡ್ ಫೀಲ್ಡರ್ ಆಟಗಾರ ಪ್ರಶಸ್ತಿಯನ್ನು ಡಾಲ್ಫಿನ್ಸ್ ತಂಡದ ಪೃಥ್ವಿ, ಫಾರ್ವಡ್ ಪ್ರಶಸ್ತಿಯನ್ನುಡಾಲ್ಪೀನ್ಸ್‍ನ ಕಾಳಿಮುತ್ತು, ಬೆಸ್ಟ್ ಡಿಫೆಂಡರ್ ಆಗಿ ಕೂಡಿಗೆ ತಂಡದ ನಾಗೇಶ್, ಉತ್ತಮ ಗೋಲ್‍ಕೀಪರ್ ಆಗಿ ಕೂಡಿಗೆಯ ಪೃಥ್ವಿ, ಪಂದ್ಯ ಪುರುಷೋತ್ತಮರಾಗಿ ಡಾಲ್ಪೀನ್ಸ್‍ನ ಆಭರಣ್ ಮತ್ತು ಭರವಸೆಯ ಆಟಗಾರ ಪ್ರಶಸ್ತಿಯನ್ನು ಕೂಡಿಗೆಯ ಚೇತನ್ ಪಡೆದರು.
ಕ್ರೀಡಾಕೂಟದ ಯಶಸ್ಸಿಗೆ ಡಾಲ್ಪೀನ್ಸ್ ಕ್ಲಬ್‍ನ ಅಧ್ಯಕ್ಷ ಹೆಚ್.ಎನ್. ಅಶೋಕ್, ಗೌರವಾಧ್ಯಕ್ಷ ಕೆ.ಜೆ. ಗಿರೀಶ್, ಉಪಾಧ್ಯಕ್ಷ ಎಂ.ಇ. ಮಹೇಶ್, ಕಾರ್ಯದರ್ಶಿ ಎಸ್.ಆರ್. ವಿನಾಯಕ್, ಖಜಾಂಚಿ ಎಂ.ಡಿ. ಲಿಖಿತ್, ಪದಾಧಿಕಾರಿಗಳಾದ ಬಿ.ಜಿ. ಅಭಿಷೇಕ್, ಮಂಜುನಾಥ್, ಪ್ರೀತಂ, ಸಜನ್, ಸತೀಶ್ ಸೇರಿದಂತೆ ಇತರರು ಶ್ರಮಿಸಿದರು.