ವೀರಾಜಪೇಟೆ, ಏ. 15: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಅನೇಕ ವರ್ಷಗಳ ಹಿಂದಿನಿಂದಲೂ ದೌರ್ಜನ್ಯ ತಡೆ ಕಾಯಿದೆ ಜಾರಿಯಲ್ಲಿದ್ದರೂ ದೌರ್ಜನ್ಯಗಳು ಕಡಿಮೆಯಾಗಿಲ್ಲ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಜಯಪ್ರಕಾಶ್ ನಾರಾಯಣ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಬೇಕು. ಮಕ್ಕಳಿಗಾಗಿ ಕಾನೂನು ಸೇವಾ ಸಮಿತಿಯು ಉಚಿತ ಕಾನೂನುಗಳನ್ನು ನೀಡುತ್ತಿದ್ದು ಮಕ್ಕಳು-ಪೋಷಕರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ದೇಶದ ಉಜ್ವಲ ಭವಿಷ್ಯ ಮಕ್ಕಳ ಮೇಲಿದೆ. ಯಾವದೇ ರೀತಿಯಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮಗಳು ಬೀರದಂತೆ ಪೋಷಕರು ಎಚ್ಚರ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಮಗುವಿನ ಲಾಲನೆ-ಪಾಲನೆ ಮಾಡಲು ಪೋಷಕರುಗಳಿಗೆ ಅವಕಾಶಗಳೇ ಸಿಗುತ್ತಿಲ್ಲ. ಮಕ್ಕಳು ತಪ್ಪು ಮಾಡಿದಲ್ಲಿ ಅವರಿಗೆ ತಿಳುವಳಿಕೆಯನ್ನು ನೀಡಿ ಅವರನ್ನು ಸರಿದಾರಿಗೆ ತರುವಂತಾಗಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲ ಬಿ.ಬಿ. ಮಾದಪ್ಪ ತಮ್ಮ ಉಪನ್ಯಾಸದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಪ್ರತಿಯೊಬ್ಬರು ಮುಂದಾಗಬೇಕು. ದಿನದ 12 ಗಂಟೆಯಲ್ಲಿ 8 ಗಂಟೆಗಳ ಕಾಲ ಮಕ್ಕಳು ಶಾಲೆಯಲ್ಲಿಯೇ ಇರುವದರಿಂದ ಹೆಚ್ಚಿನ ಒತ್ತಡ ಶಿಕ್ಷಕರ ಮೇಲಿದೆ ಎಂದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕಿ ರತಿ ಹಾಗೂ ಇತರರು ಉಪಸ್ಥಿತರಿದ್ದರು. ಶಿಕ್ಷಕ ಲಾಲ್ ಕುಮಾರ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಅನ್ರಿತಾ ಫುರ್ಟಾಡೊ ನಿರೂಪಿಸಿದರೆ. ಬಿ.ಪಿ. ಉತ್ತಪ್ಪ ವಂದಿಸಿದರು.