ವೀರಾಜಪೇಟೆ, ಏ. 15: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗಕ್ಕೆ ಸೇರಿದ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಸೇರಿದ ಎರಡು ಮುಕ್ಕಾಲು ಎಕರೆ ಜಾಗ ಖಾಲಿ ಬಿದ್ದಿದ್ದು ಬಸ್ ಡಿಪೋಗಾಗಿ ಜಾಗ ಹುಡುಕುತ್ತಿರುವ ಸಂಸ್ಥೆಯ ಕಾರ್ಯ ವೈಖರಿ ಕೈಯ್ಯಲ್ಲಿ ಚಿನ್ನ ಇಟ್ಟುಕೊಂಡು ಬೆಳ್ಳಿಯನ್ನು ಹುಡುಕುವಂತಿದೆ.ಕಳೆದ 33 ವರ್ಷಗಳ ಹಿಂದೆ ಸಾರಿಗೆ ಸಂಸ್ಥೆ, ಬಸ್ ನಿಲ್ದಾಣಕ್ಕಾಗಿ ಇಲ್ಲಿನ ಗೋಣಿಕೊಪ್ಪ ರಸ್ತೆಯಲ್ಲಿ ಸುಮಾರು ನಾಲ್ಕು ಎಕರೆ ಭೂಮಿಯನ್ನು ಖರೀದಿಸಿ ಈ ಪೈಕಿ ಒಂದು ಎಕರೆ 10 ಸೆಂಟು ಜಾಗದಲ್ಲಿ ವಿಶಾಲವಾದ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು ಉಳಿದ ಜಾಗ ಎರಡು ಎಕರೆ 90 ಸೆಂಟು ಹಾಗೆಯೇ ಉಳಿದುಕೊಂಡಿದೆ. ಇದರಲ್ಲಿ ಸುಮಾರು 15 ಸೆಂಟುಗಳಷ್ಟು ಜಾಗವನ್ನು ಆಜು ಬಾಜಿನವರು ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವು ಮಾಡಿಕೊಡುವಂತೆ ಇತ್ತೀಚೆಗೆ ಜಾಗದ ಸರ್ವೆ ಮಾಡಿಸಿದ ಸಾರಿಗೆ ಸಂಸ್ಥೆ ಒತ್ತುವರಿದಾರರಿಗೆ ನೋಟೀಸ್ ಜಾರಿ ಮಾಡಿ ಇನ್ನೂ ಕೂಡ ಅದು ನೆನೆಗುದಿಗೆ ಬಿದ್ದಿದೆ. ಈ ನಡುವೆ ಸಾರಿಗೆ ಸಂಸ್ಥೆ ಬಸ್ಸು ಡಿಪೋಗಾಗಿ ಇನ್ನು 4 ಎಕರೆ ಜಾಗವನ್ನು ಖರೀದಿಸಲು ಹುಡುಕುತ್ತಿದ್ದು ಪುತ್ತೂರು ವಿಭಾಗೀಯ ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದ ಇನ್ನು ಜಾಗ ಲಭ್ಯವಾಗಿಲ್ಲ ಎನ್ನಲಾಗಿದೆ.

ವೀರಾಜಪೇಟೆ ತಾಲೂಕು ಕೇಂದ್ರವಾಗಿರುವದರಿಂದ ಇಲ್ಲಿನ ಬಸ್ ನಿಲ್ದಾಣದ ಬಸ್ ಡಿಪೋ ಅವಶ್ಯಕತೆಗಾಗಿ ಮಡಿಕೇರಿ ಬಸ್ ಡಿಪೋವನ್ನು ಅವಲಂಭಿಸಿದೆ. ವೀರಾಜಪೇಟೆಯ ಬಸ್ ನಿಲ್ದಾಣದಲ್ಲಿಯೇ ಮಿನಿ ಬಸ್ ಡಿಪೋ ಆರಂಭಿಸಲು ಅಗತ್ಯವಾದ ಜಾಗ ಇತರ ಸೌಲಭ್ಯಗಳು ಲಭ್ಯವಿರುವಾಗ ಈ ಜಾಗವನ್ನು ಬಳಸಿಕೊಂಡು ಮಿನಿ ಬಸ್ ಡಿಪೋ ನಿರ್ಮಿಸಬಹುದಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲಿಯೇ ಮಿನಿ ಬಸ್ ಡಿಪೋ ನಿರ್ಮಿಸಿದರೆ ಅನುಕೂಲ ವಾಗಲಿದೆ. ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗಾಧಿಕಾರಿಗಳು ಈ ಕುರಿತು ಆಸಕ್ತಿ ಇಲ್ಲದಂತೆ ವರ್ತಿಸು ತ್ತಿದ್ದು, ಬಸ್ ಮಿನಿ ಡಿಪೋಗಾಗಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಪ್ರತಿ ದಿನ ಸುಮಾರು 151 ಸಂಸ್ಥೆಯ ಸಾರಿಗೆ ಬಸ್‍ಗಳು ಈ ಬಸ್ ನಿಲ್ದಾಣವನ್ನು ಸಂಪರ್ಕಿಸಿ ಮುಂದಕ್ಕೆ ತೆರಳಲಿವೆ. ಈ ಪೈಕಿ ಐದು ಐರಾವತ, ಎರಡು ರಾಜಹಂಸ ಬಸ್‍ಗಳು 13 ಅಂತರಾಜ್ಯ ಪರವಾನಗಿ ಹೊಂದಿರುವ ಬಸ್‍ಗಳು ಸೇರಿವೆ. ಬಸ್ ನಿಲ್ದಾಣವನ್ನು ಸಂಪರ್ಕಿಸುವ ಬಸ್‍ಗಳು ದುರಸ್ತಿಗೊಳಗಾದ ಸಂದರ್ಭದಲ್ಲಿ ಹುಣಸೂರು ಡಿಪೋವನ್ನು ಸಂಪರ್ಕಿಸಬೇಕಾಗಿದೆ.

ವೀರಾಜಪೇಟೆ ಬಸ್ ನಿಲ್ದಾಣದಿಂದ ಅತಿ ದೂರ ಕ್ರಮಿಸುವ ಬಸ್ ಮಾರ್ಗವೆಂದರೆ ಕೇರಳದ ಎರ್ನಾಕುಲಂ. ಪ್ರತಿ ದಿನ ಸುಮಾರು 430 ಕಿ.ಮೀ. ಅಂತರದ ಎರ್ನಾಕುಲಂಗೆ

(ಮೊದಲ ಪುಟದಿಂದ) ಬಸ್ ವ್ಯವಸ್ಥೆ ಹಾಗೂ 320 ಕಿ.ಮೀ. ಅಂತರದ ಕೋಲಾರ ಜಿಲ್ಲೆಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಸ್ ನಿಲ್ದಾಣಕ್ಕೆ ಎಲ್ಲ ಸೌಕರ್ಯಗಳಿದ್ದರೂ ಮಿನಿ ಬಸ್ ಡಿಪೋದ ಕೊರತೆಯೊಂದು ಸಮಸ್ಯೆಯಾಗಿದೆ. ಈಗ ರಾಜ್ಯದಲ್ಲಿ ಸಣ್ಣ ಜನ ಸಂಖ್ಯೆ ಇರುವ ಹಾವೇರಿ, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ಹುಣಸೂರು, ಕೆ.ಆರ್. ನಗರ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಮಿನಿ ಬಸ್ ಡಿಪೋ ಆರಂಭಿಸಿ ಚಾಲನೆಯಲ್ಲಿದೆ. ಇದು ಸಾರಿಗೆ ಸಂಸ್ಥೆಯ ವಿಭಾಗಾಧಿಕಾರಿಗಳ ಗಮನಕ್ಕೆ ಬಂದಿದ್ದರೂ ನಿರ್ಲಕ್ಷ್ಯ ತಾಳಿರುವದು ಸಂಸ್ಥೆಯ ಬಸ್ ನಿಲ್ದಾಣ ಹಾಗೂ ಪ್ರಯಾಣಿಕರಿಗೆ ಡಿಪೋ ಸೌಲಭ್ಯ ಇಲ್ಲದಂತಾಗಿದೆ.

ಈಗಿನ ಬಸ್ ನಿಲ್ದಾಣದಲ್ಲಿರುವ ಎರಡು ಮುಕ್ಕಾಲು ಎಕರೆ ಜಾಗವನ್ನು ಬಳಸಿದರೆ ವ್ಯವಸ್ಥಿತವಾದ ಎಲ್ಲ ಸೌಲಭ್ಯಗಳಿಂದ ಕೂಡಿದ ಮಿನಿ ಬಸ್ ಡಿಪೋ ನಿರ್ಮಿಸಬಹುದಾಗಿದೆ. ಇದನ್ನು ಸಂಸ್ಥೆಯ ವಿಭಾಗಾಧಿಕಾರಿಗಳ ತಂಡ ಪರಿಶೀಲಿಸಿ ಮಿನಿ ಬಸ್ ಡಿಪೋಗೆ ಮಂಜೂರಾತಿ ನೀಡಬೇಕಾಗಿದೆ.

- ಡಿ. ಎಂ. ಆರ್