ವೀರಾಜಪೇಟೆ, ಏ. 15: ವಿಶು ಸಂಕ್ರಮಣ ಪ್ರಯುಕ್ತ ವೀರಾಜಪೇಟೆ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಹಾ ಪೂಜೆಯ ನಂತರ ಎನ್. ವೆಂಕಟೇಶ ಕಾಮತ್ ಟ್ರಸ್ಟ್‍ನ ಸಹಯೋಗದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ವತಿಯಿಂದ ಡಾ. ಶ್ರೀಧರ ಭಂಡಾರಿ ಹಾಗೂ ಸಂಗಡಿಗರಿಂದ ‘ಶ್ರೀ ಕೃಷ್ಣ ಲೀಲೆ-ಕಂಸ ವಧೆ’ ಎಂಬ ಯಕ್ಷಗಾನ ಬಯಲಾಟ ನಡೆಯಿತು.
ಇದಕ್ಕೂ ಮೊದಲು ದೇವಾಲಯದಲ್ಲಿ ಸತ್ಯನಾರಾಯಣ ಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ಬಳಿಕ ಯಕ್ಷಗಾನದಲ್ಲಿ ಸುಮಾರು 47 ವರ್ಷಗಳಿಂದಲೂ ಸೇವೆ ಸಲ್ಲಿಸಿ ಡಾಕ್ಟರೇಟ್ ಪಡೆದ ಪುತ್ತೂರಿನ ಶ್ರೀಧರ ಭಂಡಾರಿ ಅವರನ್ನು ಗೌರವಿಸಲಾಯಿತು. ಈ ವೇಳೆ ಬಸವೇಶ್ವರ ದೇವಾಲಯದ ಅಧ್ಯಕ್ಷ ಎನ್.ಜಿ. ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಕೀಲ ಎನ್. ರವಿಂದ್ರ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜೆ.ಎನ್. ಪುಷ್ಪರಾಜ್, ಉದ್ಯಮಿ ಮಿತುನ್ ಚೌಟರ್, ಚಂದ್ರಪ್ರಸಾದ್, ಸಂಪತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.