ಮಡಿಕೇರಿ, ಏ. 15: ಕೊಡಗು ಜಿಲ್ಲೆಯಲ್ಲಿ ವಿವಾಹ ಇತ್ಯಾದಿ ಸಮಾರಂಭಗಳಲ್ಲಿ ಮದ್ಯ ಬಳಕೆ ಸಂಬಂಧ ಗೊಂದಲ ನಿವಾರಿಸಲು ಕೋರಿ, ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅಬ್ಕಾರಿ ಉಪ ಆಯುಕ್ತರು ರಾಜ್ಯ ವರಿಷ್ಠರಿಗೆ ಬರೆದಿದ್ದ ಪತ್ರಗಳಿಗೆ ಮೇಲಧಿಕಾರಿಗಳು ಉತ್ತರಿಸಿ, ನಿಯಮಾನುಸಾರ ಮದ್ಯ ಬಳಕೆಗೆ ಸಮ್ಮತಿಸಿದ್ದಾರೆ.ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಪ್ರಸ್ತಾಪ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಪರ ಮುಖ್ಯ ಚುನಾವಣಾಧಿಕಾರಿ ಡಾ.ಕೆ.ಜಿ. ಜಗದೀಶ ಈ ಕೆಳಗಿನಂತೆ ಉತ್ತರಿಸಿದ್ದಾರೆ.ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ಕೋರಿದಂತೆ, ಖಾಸಗಿ ಸಭೆ, ಸಮಾರಂಭಗಳಲ್ಲಿ ಯಾವದೇ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳ ಕೊಡುಗೆಯನ್ನು ಸ್ವೀಕರಿಸದೇ ಅಥವಾ ರಾಜಕೀಯ ಚುಟವಟುಕೆಗಳು ಒಳಗೊಳ್ಳದೇ ಇದ್ದಲ್ಲಿ ಹಾಲಿ ಇರುವ ಕಾಯ್ದೆ, ಮಾರ್ಗಸೂಚಿ ಪ್ರಕಾರ ಮದುವೆ ಇತರೆ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮದ್ಯವನ್ನು ಬಳಸಲು ಅವಕಾಶ ಇದ್ದಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾ ಗುವದಿಲ್ಲವೆಂದು ಸ್ಪಷ್ಟೀಕರಿಸಿದೆ.ಅಲ್ಲದೆ ಅಬ್ಕಾರಿ ಜಿಲ್ಲಾ ಉಪ ಆಯುಕ್ತ ನಾಗೇಶ್ ಅವರು ರಾಜ್ಯ ಅಬ್ಕಾರಿ ಆಯುಕ್ತ ಮಂಜುನಾಥ್ ನಾಯರ್ ಅವರಿಗೆ (ಮೊದಲ ಪುಟದಿಂದ) ಸಲ್ಲಿಸಿದ್ದ ಪ್ರಸ್ತಾವನೆಗೆ ಈ ಕೆಳಗಿನಂತೆ ಉತ್ತರ ಲಭಿಸಿದೆ. ವಿಷಯಕ್ಕೆ ಸಂಬಂಧಪಟ್ಟಂತೆ,

ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು 1968ರ ನಿಯಮ 3 ರ ಉಪ ನಿಯಮ 5ರ ಅಡಿಯಲ್ಲಿ ಸಾಂದಾರ್ಭಿಕ ಸನ್ನದಿನ ಕೋರಿಕೆಯ ಪ್ರಸ್ತಾವನೆಗಳಲ್ಲಿ ಕೆಲವು ಜಿಲ್ಲೆಯ ಅಬಕಾರಿ ಉಪ ಆಯುಕ್ತರುಗಳು ಸನ್ನದು ಕೋರಿಕೆಯ ಸ್ಥಳಕ್ಕೆ ಅನ್ವಯಿಸುವ ಕಾರ್ಯವ್ಯಾಪ್ತಿ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ನೀಡುವಂತೆ ಮತ್ತು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 5 ರ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮಂಜೂರಾತಿ ನೀಡುತ್ತಿರುವದು ಗಮನಕ್ಕೆ ಬಂದಿರುತ್ತದೆ.

ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು 1968ರ ನಿಯಮ 3ರ ಉಪ ನಿಯಮ 5ರ ಅಡಿಯಲ್ಲಿ ಸಾಂದರ್ಭಿಕ ಸನ್ನದನ್ನು ಖಾಸಗಿಯಾಗಿ ಆಯೋಜಿಸಲ್ಪಟ್ಟ ಮದುವೆ, ಇತರ ಕೌಟುಂಬಿಕ ಕಾರ್ಯಕ್ರಮಗಳು, ಮನರಂಜನೆ ಕಾರ್ಯಕ್ರಮ, ಅನುಮೋದಿತ ಸನ್ನದು ಆವರಣದಲ್ಲಿ ಮಾತ್ರ ಮದ್ಯ ಮತ್ತು ಬಿಯರ್ (ಡ್ರಾಟ್ ಬಿಯರ್ ಒಳಗೊಂಡಂತೆ) ಸೇವನೆಗೆ ಅವಕಾಶವಿರುವದರಿಂದ ಮತ್ತು ಸದರಿ ಸನ್ನದನ್ನು ಕೇವಲ ಒಂದು ದಿನದ ಅವಧಿಗೆ ಮಾತ್ರ ನೀಡುವದರಿಂದ ಈ ಸನ್ನದನ್ನು ಪಡೆಯಲು ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಪಡೆಯುವ ಅಗತ್ಯತೆಯು ಕಂಡು ಬರುತ್ತಿಲ್ಲ ಮತ್ತು ಸದರಿ ಸನ್ನದನ್ನು ಪಡೆದವರು ಮದ್ಯ, ಬಿಯರ್, ಡ್ರಾಟ್ ಬಿಯರ್‍ನ್ನು ಸ್ವಂತ ಬಳಕೆಗೆ ಮಾತ್ರ ಬಳಸಬೇಕಾಗಿದ್ದು, ಹೊರಗಿನ ಮಾರಾಟಕ್ಕೆ ಅವಕಾಶ ಇಲ್ಲದಿರುವದರಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 5, ಇಂತಹ ಸನ್ನದಿಗೆ ಅನ್ವಯಿಸುವದಿಲ್ಲ. ಆದಕಾರಣ ಇನ್ನು ಮುಂದೆ ಸಾಂದರ್ಭಿಕ ಸನ್ನದು ಕೋರಿ ಬರುವ ಪ್ರಸ್ತಾವನೆಗಳಿಗೆ ಮೇಲೆ ವಿವರಿಸಿದಂತೆ ನಿರಾಕ್ಷೇಪಣಾ ಪತ್ರ ಮತ್ತು ಸದರಿ ನಿಯಮಾವಳಿಯ ನಿಯಮ 5ರ ಕಡ್ಡಾಯಗೊಳಿಸುವಿಕೆ ಯಿಂದ ವಿನಾಯಿತಿ ನೀಡಿದೆ.

ಈ ಮೇಲಿನ ಸುತ್ತೋಲೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಅಬ್ಕಾರಿ ಉಪ ಆಯುಕ್ತರ ರಾಜ್ಯ ಅಬ್ಕಾರಿ ಆಯುಕ್ತರು ರವಾನಿಸಿದ್ದಾರೆ.