ಏ. 15: ಸೈನಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತಿಯ ಪ್ರಯುಕ್ತ ಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶನದ ‘ಸ್ವಚ್ಛ ವಿದ್ಯಾಲಯ’ ಕಾರ್ಯಕ್ರಮದ ಒಂದು ಭಾಗವಾಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಆಗಮಿಸಿದ್ದರು. ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಆಧುನಿಕ ಮಾನವನು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವದರಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರಮದಾನದ ಮೂಲಕ ಶಾಲೆಯ ಆವರಣದಲ್ಲಿದ್ದ ಎಲ್ಲಾ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ಬೋಧಕ, ಬೋಧಕೇತರ ವರ್ಗದವರು ಹಾಗೂ ಶಾಲೆಯ 534 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.