ಮಡಿಕೇರಿ, ಏ. 15: ಕೊಡಗು ಜಿಲ್ಲಾ ತುಳುವೆರೆ ಜನಪದ ಕೂಟದ ವತಿಯಿಂದ ‘ಬಿಸು ಪರ್ಬ’ ಸಂತೋಷ ಕೂಟ ಕಾರ್ಯಕ್ರಮ ತಾ. 17 ರಂದು ನಗರದ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ತಾಲೂಕು ಕೂಟದ ನಿರ್ದೇಶಕ ಬಿ.ಎಸ್. ಆನಂದ ಹಾಗೂ ತಾಲೂಕು ಅಧ್ಯಕ್ಷ ಪ್ರಭು ರೈ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಆಚರಣೆ ನಡೆಯಲಿದೆ ಎಂದು ತಿಳಿಸಿದರು.

ತುಳು ಭಾಷಿಗರಿಗೆ ಬಿಸು ಅತ್ಯಂತ ಮಹತ್ವದ ಹಬ್ಬವಾಗಿದ್ದು, ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲಾ ತುಳು ಬಾಷಿಕ ಜನರು ಒಂದೆಡೆ ಸೇರುವ ಮೂಲಕ ನಮ್ಮ ಸಂಸ್ಕøತಿ ಆಚಾರ ವಿಚಾರ, ಪದ್ಧತಿ, ಪರಂಪರೆ ಯನ್ನು ಉಳಿಸಿ ಬೆಳೆಸುವದಲ್ಲದೆ ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರು ವದಾಗಿ ವಿವರಿಸಿದರು.

ಅಂದು ಪೂರ್ವಾಹ್ನ 10 ಗಂಟೆಗೆ ಬಿಸು ಪರ್ಬ ಆಚರಣಾ ಸಮಿತಿ ಅಧ್ಯಕ್ಷ ಬಿ.ಬಿ. ಐತಪ್ಪ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ತುಳುವೆರೆ ಜನಪದ ಕೂಟದ ಅಧ್ಯಕ್ಷ ಕಿಲ್ಪಾಡಿ ಶೇಖರ ಭಂಡಾರಿ ನೆರವೇರಿಸಲಿದ್ದು, ಮಂಗಳೂರಿನ ದಯಾನಂದ ಕತ್ತಲ್ಸಾರ್ ಮುಖ್ಯ ಭಾಷಣಕಾರರಾಗಿ ಉಪನ್ಯಾಸ ನೀಡಲಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಜನಪದ ಕೂಟದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಮಧ್ಯಾಹ್ನ ತುಳು ಸಂಸ್ಕøತಿಗೆ ಪೂರಕವಾದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಅಪರಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಿನಿಮಾ ನೃತ್ಯ, ಜನಪದ ನೃತ್ಯ ಸೇರಿದಂತೆ ಸುಮಾರು 12 ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ 7 ಗಂಟೆಯವರೆಗೆ ಉಮೇಶ್ ಮಿಜಾರು ತಂಡದವರಿಂದ ‘ತೆಲಿಕೆದ ಗೊಂಚಿಲ್’ ಹಾಸ್ಯಮಯ ನಾಟಕ ಹಾಗೂ ಇತರ ಕಾರ್ಯಕ್ರಮಗಳು ಜರುಗಲಿದೆ ಎಂದು ನುಡಿದರು.

ಗೋಷ್ಠಿಯಲ್ಲಿ ಕೂಟದ ತಾಲೂಕು ಉಪಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಪ್ರಸಾದ ಪೆರ್ಲ, ನಗರಧ್ಯಕ್ಷೆ ವಿಜಯಲಕ್ಷ್ಮಿ ರವಿ ಶೆಟ್ಟಿ, ಪ್ರಮುಖರಾದ ಅಶೋಕ್ ಆಚಾರ್ಯ ಉಪಸ್ಥಿತರಿದ್ದರು.