ಮಡಿಕೇರಿ, ಏ. 16: ಭಾರತೀಯ ಜನತಾಪಾರ್ಟಿಯಿಂದ ಈಗಾಗಲೇ ಎರಡನೇ ಪಟ್ಟಿ ಬಿಡುಗಡೆಯೊಂದಿಗೆ ರಾಜ್ಯದ ನೂರಾರು ವಿಧಾನಸಭಾ ಕ್ಷೇತ್ರಗಳಿಗೆ ಅಧಿಕೃತ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೂ, ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಇನ್ನು ಅಭ್ಯರ್ಥಿ ಹೆಸರು ಪ್ರಕಟಿಸದಿರುವದು ಹಾಲೀ ಶಾಸಕ ಕೆ.ಜಿ. ಬೋಪಯ್ಯ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.ಇತ್ತೀಚೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಹೆಸರು ಮೊದಲನೆಯ ಪಟ್ಟಿಯಲ್ಲೇ ಪ್ರಕಟಿಸಲಾಯಿತು. ಆ ಬೆನ್ನಲ್ಲೇ ಕೆ.ಜಿ. ಬೋಪಯ್ಯ ಅವರ ಹೆಸರು ಪ್ರಕಟಗೊಳ್ಳದ ಬಗ್ಗೆ ಜಿಲ್ಲೆಯ ಬಹುತೇಕ ಮುಖಂಡರು, ರಾಜಧಾನಿ ಬೆಂಗಳೂರಿಗೆ ತೆರಳಿ ಬಿಜೆಪಿ ವರಿಷ್ಠರಾದ ಬಿ.ಎಸ್. ಯಡಿಯೂರಪ್ಪ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಇತರ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.ಈ ವೇಳೆ ತಾ. 16 ರಂದು ದ್ವಿತೀಯ ಪಟ್ಟಿಯಲ್ಲಿ ನಿಶ್ಚಿತವಾಗಿ ಬೋಪಯ್ಯ ಅವರ ಹೆಸರು ಬಿಡುಗಡೆಗೊಳ್ಳಲಿದೆ ಎಂಬ ಭರವಸೆ ವರಿಷ್ಠರಿಂದ ಲಭಿಸಿದ್ದಾಗಿ ಬೋಪಯ್ಯ ಆಪ್ತ ವಲಯದ ಪ್ರಮುಖರೊಬ್ಬರು ಸುಳಿವು ನೀಡಿದ್ದರು.
ಆದರೆ ಇಂದು ಬಿಡುಗಡೆಗೊಂಡಿರುವ ಪಟ್ಟಿಯಲ್ಲಿಯೂ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಪ್ರಕಟಗೊಳ್ಳದಿರುವ ಬಗ್ಗೆ ಜಿಲ್ಲಾ ಬಿಜೆಪಿಯ ಹಲವು ಮುಖಂಡರೊಂದಿಗೆ, ಕೆ.ಜಿ. ಬೋಪಯ್ಯ ಹಾಗೂ ಕಾರ್ಯಕರ್ತ ಬೆಂಬಲಿಗರು ತೀವ್ರ ಆತಂಕಗೊಂಡಿದ್ದು, ಆಪ್ತ ವಲಯದೊಂದಿಗೆ ಅವರು ಬೇಸರ ವ್ಯಕ್ತಪಡಿಸಿದ್ದಾಗಿ ಮೂಲಗಳಿಂದ ಗೊತ್ತಾಗಿದೆ.
ಇನ್ನೊಂದೆಡೆ ವೀರಾಜಪೇಟೆ ಕ್ಷೇತ್ರದ ಬಗ್ಗೆ ರಾಜ್ಯದ ಹಲವು ಕ್ಷೇತ್ರಗಳೊಂದಿಗೆ ಕಾದುನೋಡುವ ತಂತ್ರ ಅನುಸರಿಸಿರುವ ವರಿಷ್ಠರು ಅಂತಿಮ ಕ್ಷಣದಲ್ಲಿ ಕೆ.ಜಿ. ಬೋಪಯ್ಯ ಅವರಿಗೆ ಹಸಿರು ನಿಶಾನೆ ತೋರುವ ವಿಶ್ವಾಸವನ್ನು ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.