ಮಡಿಕೇರಿ. ಏ, 16: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ 30 ಗ್ರಾಮಗಳ ಅಭಿವೃದ್ಧಿಗೆ ರೂಪಿಸಿದ್ದ 6 ಕೋಟಿ ವೆಚ್ಚದ ಯೋಜನೆಯ ಕ್ರಿಯಾ ಯೋಜನೆಯನ್ನು ಕೈಬಿಟ್ಟು, ತಮ್ಮ ಇಚ್ಛೆಗೆ ತಕ್ಕಂತೆ ಕಾಮಗಾರಿಗಳನ್ನು ನಡೆಸಲು ಮುಂದಾಗಿರುವ ಜಿಲ್ಲಾ ಐಟಿಡಿಪಿ ಅಧಿಕಾರಿ ಹಾಗೂ ಇಲಾಖಾ ನಿರ್ದೇಶಕರ ವಿರುದ್ಧ ಉಪ ಲೋಕಾಯುಕ್ತ ಮತ್ತು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2016ನೇ ಸಾಲಿನಲ್ಲಿ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರ ಪ್ರಯತ್ನದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಕೊಡಗಿನ 30 ಗ್ರಾಮಗಳಿಗೆ ತಲಾ 20 ಸಾವಿರ ರೂ.ಗಳಂತೆ ಒಟ್ಟು 6 ಲಕ್ಷ ಅನುದಾನವನ್ನು ಒದಗಿಸಿದ್ದರು. ಇದಕ್ಕೆ ಸಂಬಂಧ ಪಟ್ಟಂತೆ ಆಯಾ ಗ್ರಾಮಗಳಲ್ಲಿ ನಡೆಯಬೇಕಾದ ಕಾಮಗಾರಿಗಳ ಕ್ರಿಯಾಯೋಜನೆ ಯನ್ನು ಸಿದ್ದಪಡಿಸಿ ಅನುಮೋದನೆ ಯನ್ನು ಪಡೆಯಲಾಗಿತ್ತು. ಆದರೆ, ಜಿಲ್ಲೆಯ ಐಟಿಡಿಪಿ ಅಧಿಕಾರಿ ಪ್ರಕಾಶ್ ಅವರು ಯೋಜನೆಯನ್ನು ಜಾರಿ ಮಾಡದೆ ವಿಳಂಬ ಧೋರಣೆ ತಳೆದಿದ್ದರೆಂದು ಆರೋಪಿಸಿದರು. ಸುಮಾರು ಒಂದು ವರ್ಷಗಳಿಂದ ಅನುಮೋದಿತ ಕಾಮಗಾರಿ ನಡೆಯದಿದ್ದರೂ ಚುನಾವಣಾ ಘೋಷಣೆಗೆ ಕೆಲವು ದಿನಗಳ ಹಿಂದೆ 30 ಗ್ರಾಮಗಳ ಅಭಿವೃದ್ಧಿಯ ಹಳೆಯ ಕಾಮಗಾರಿಗಳನ್ನು ಬದಿಗೆ ಸರಿಸಿ, ಇಲಾಖಾ ನಿರ್ದೇಶಕ ರೇವಣಪ್ಪ ಮತ್ತು ಜಿಲ್ಲಾ ಐಟಿಡಿಪಿ ಅಧಿಕಾರಿಗಳು ತಮಗಿಷ್ಟ ಬಂದ ಕಾಮಗಾರಿಗಳ ಪಟ್ಟಿಗೆ ಅನುಮೋದನೆ ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದರು. ಈ ಬಗ್ಗೆ ಸಲ್ಲಿಸಿದ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಕಡತವನ್ನು ತಡೆಹಿಡಿದಿರುವದಾಗಿ ಮೈನಾ ತಿಳಿಸಿದ್ದಾರೆ. ಬಡವರ್ಗದ ಮಂದಿಗೆ ನಿವೇಶನ ಒದಗಿಸುವ ಐಡಿಎಸ್‍ಎಂಟಿ ಯೋಜನೆಯಡಿ ಕುಶಾಲನಗರ ಪಪಂನ ಗುಂಡೂರಾವ್ ಬಡಾವಣೆ ಯಲ್ಲಿ ನಿವೇಶನಗಳನ್ನು ಒದಗಿಸುವ ಫಲಾನುಭವಿಗಳ ಪಟ್ಟಿಯಲ್ಲಿ ಜಿ.ಪಂ ಸದಸ್ಯೆ ಮಂಜುಳಾ ಅವರ ಹೆಸರಿದ್ದು, ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ಸಲ್ಲಿಸಿರುವದಾಗಿ ಹೇಳಿದರು.

ಇತ್ತೀಚೆಗೆ ಭಾಗಮಂಡಲ ವ್ಯಾಪ್ತಿಯ ಕೋರಂಗಾಲದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿ ಗಳನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಮೂರನೇ ಆರೋಪಿ ಸ್ಥಾನದಲ್ಲಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಅವರನ್ನು ಬಂಧಿಸಿಲ್ಲವೆಂದು ಆರೋಪಿಸಿದ ಅವರು ತಕ್ಷಣ ತಪ್ಪಿತಸ್ತರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಬಲಿಷ್ಠವಾಗಿ ಕಟ್ಟಿ ಬೆಳೆಸಲಾಗಿದ್ದು, ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಬಡಜನರ ವಿರುದ್ಧವಾಗಿದೆಯಲ್ಲದೆ, ಈ ಸರ್ಕಾರದಿಂದ ರೈತ ಸಮೂಹಕ್ಕು ಹೆಚ್ಚಿನ ಪ್ರಯೋಜನವಾಗಿಲ್ಲ. ಕೇಂದ್ರದ ಜನವಿರೋಧಿ ಧೋರಣೆಗಳಿಂದ ಜನತೆ ಬೇಸತ್ತಿದ್ದಾರೆಂದು ಟೀಕಿಸಿದ ಟಾಟು ಮೊಣ್ಣಪ್ಪ, ಬಡಜನರ ಏಳಿಗೆಯನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿದ ಸಿದ್ದರಾಮಯ್ಯ ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಅಧ್ಯಕ್ಷ ಐಚೆಟ್ಟೀರ ಚಿಣ್ಣಪ್ಪ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂವಯ್ಯ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್. ಸುರೇಶ್ ಉಪಸ್ಥಿತರಿದ್ದರು.