ಮಡಿಕೇರಿ, ಏ. 16: ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೊಡಗರಹಳ್ಳಿ ಗ್ರಾಮದ ನಿವಾಸಿ ಎಂ.ಸಿ. ಸುಬ್ಬಯ್ಯ ಎಂಬವರ ಮಗ ಆರೋಪಿ ಎಂ.ಎಸ್. ತಿಲಕ್ ಎಂಬಾತ ತಾ. 18.2.2010 ರಂದು ಬಂದೂಕು ಹೊಂದಲು ಜಮ್ಮಾ ವಿನಾಯಿತಿ ಪತ್ರ ಪಡೆಯುವ ಬಗ್ಗೆ ಮಡಿಕೇರಿಯ ರಾಣಿಪೇಟೆ ನಿವಾಸಿ ನೋಟರಿ ಅಡ್ವೋಕೇಟ್ ಎಂ.ಬಿ. ಪೂವಣ್ಣ ಜೊತೆ ಸೇರಿಕೊಂಡು ಸುಳ್ಳು ದಾಖಲಾತಿಯನ್ನು ಸೃಷ್ಟಿಸಿದ್ದಾಗಿದೆ. ಸೋಮವಾರಪೇಟೆ ತಾಲೂಕು ದಂಡಾಧಿಕಾರಿಗಳಿಗೆ ಅದನ್ನು ಕೊಟ್ಟು ಜಮ್ಮಾ ವಿನಾಯಿತಿ ಪತ್ರವನ್ನು ಪಡೆದಿರುವದು ತನಿಖೆಯಿಂದ ದೃಢಪಟ್ಟಿದೆ. ಆ ಮೇರೆಗೆ ಆರೋಪಿತನ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.ಈ ಬಗ್ಗೆ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಿಚಾರಣೆ ಜರುಗಿದ್ದು, ಆರೋಪಿ ಎಂ.ಎಸ್. ತಿಲಕ್ ಶಿಕ್ಷಾರ್ಹ ಅಪರಾಧ ಎಸಗಿರುತ್ತಾನೆ ಎಂದು ಜೆಎಂಎಫ್‍ಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಶರ್ಮಿಳಾ ಕಾಮತ್ ತಾ. 13 ರಂದು ಆರೋಪಿತನಿಗೆ 6 ತಿಂಗಳ ಸಜೆ ಹಾಗೂ ರೂ. 2 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.

ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಸಂತೋಷ್ ವಾದವನ್ನು ಮಂಡಿಸಿದ್ದರು.