ಸೋಮವಾರಪೇಟೆ,ಏ.16: ಯುವ ಜನಾಂಗ ದುಶ್ಚಟಗಳಿಂದ ದೂರವಿದ್ದು, ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕೆಂದು ಉದ್ಯಮಿ ಹರಪಳ್ಳಿ ರವೀಂದ್ರ ಕರೆನೀಡಿದರು. ಪಟ್ಟಣದ ಮಾನಸ ಸಭಾಂಗಣದಲ್ಲಿ ಆಯೋಜಿಸಿದ್ದ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ತೋಳೂರುಶೆಟ್ಟಳ್ಳಿ ಘಟಕ ಪ್ರಾರಂಭೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಸಮಯಕ್ಕೆ ಮಹತ್ವ ನೀಡಿ ಕಾಯಕದ ಮೂಲಕ ದೇವರನ್ನು ಕಾಣುವಂತಾದಾಗ ದೇವರು ಒಲಿಯುತ್ತಾನೆ. ಮನುಷ್ಯನಿಗೆ ಸಂಪತ್ತು ಬಂದಂತೆ ಬೀಗುತ್ತಾನೆ. ಆದರೆ ಸಮಾಜ ನಮಗೆ ಸಂಪತ್ತನ್ನು ನೀಡಿದಾಗ ನಾವು ಸಮಾಜಕ್ಕೆ ಚಿರಋಣಿಗಳಾಗಬೇಕಾಗುತ್ತದೆ. ಅಂತಹ ಉದಾತ್ತ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಸೋಮವಾರಪೇಟೆ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ರವೀಂದ್ರನಾಥ್ ಮಾತನಾಡಿ, ಹರಪಳ್ಳಿ ರವೀಂದ್ರರವರಲ್ಲಿರುವ ಆದರ್ಶ ಗುಣಗಳನ್ನು ಪ್ರತಿಯೊಬ್ಬ ಸದಸ್ಯರೂ ಮೈಗೂಡಿಸಿಕೊಳ್ಳುವ ಪ್ರಯತ್ನವಾದಾಗ ಮಾತ್ರ ಅವರ ಹೆಸರಿನಲ್ಲಿ ಕಟ್ಟುವ ಅಭಿಮಾನಿ ಸಂಘಕ್ಕೆ ಅರ್ಥ ಬರುತ್ತದೆ ಎಂದರು. ಪ್ರತಿಯೊಬ್ಬರು ಪರರ ಕಷ್ಟಗಳಲ್ಲಿ ಭಾಗಿಯಾಗುವದು, ಧ್ವೇಷಾಸೂಯೆಗಳನ್ನು ಬದಿಗೊತ್ತಿ ಪರರನ್ನು ಪ್ರೀತಿಯಿಂದ ಕಾಣುವದು, ಕಾನೂನನ್ನು ಗೌರವಿಸುವದನ್ನು ಮೈಗೂಡಿಸಿಕೊಂಡರೆ ಅಂತಹ ವ್ಯಕ್ತಿಗಳನ್ನು ಸಮಾಜ ಗೌರವಿಸುತ್ತದೆ ಎಂದು ರವೀಂದ್ರನಾಥ್ ಅಭಿಪ್ರಾಯಿಸಿದರು.
ಕಳೆದ ಕೆಲವು ವರ್ಷಗಳಿಂದ ಬರಿದಾಗಿದ್ದ ಯಡೂರಿನ ಕೆರೆ ಹಾಗೂ ಪಟ್ಟಣದಲ್ಲಿನ ಏಕೈಕ ಕೆರೆಯಾದ ಆನೆಕೆರೆಯನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ, ಅಭಿವೃದ್ಧಿ ಪಡಿಸಿರುವದು ಇವರ ಜನಪರ ಸೇವೆಗೆ ಸಾಕ್ಷಿ ಎಂದರು.
ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಅಧ್ಯಕ್ಷ ಬಿ.ಎ. ಭಾಸ್ಕರ್‍ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಳ್ಳಿ ಉದಯ, ಕೆಂಚಮ್ಮನಬಾಣೆಯ ಕೆ.ಎ. ದಿನೇಶ್, ದಾಮೋಧರ್, ತೋಳೂರುಶೆಟ್ಟಳ್ಳಿ ಮೊಗೇರಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಐ.ಎಚ್. ಹರೀಶ್, ಕಾರ್ಯದರ್ಶಿ ಶಿವಪ್ಪ, ಐ.ಎಂ. ವಿಶ್ವನಾಥ್, ಶಂಕರ್, ಸೋಮಯ್ಯ, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.