ಸೋಮವಾರಪೇಟೆ, ಏ. 16: ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ನೌಕರ ಲಂಚಕ್ಕೆ ಬೇಡಿಕೆ ಇಡುವದು ಹಾಗು ಅಕ್ರಮ ಆಸ್ತಿ ಗಳಿಕೆ ಮಾಡಿರುವ ಪ್ರಕರಣಗಳಿದ್ದಲ್ಲಿ, ಸಾರ್ವಜನಿಕರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ಅಥವಾ ಮೌಖಿಕ ದೂರು ಸಲ್ಲಿಸಬಹುದು ಎಂದು ಎಸಿಬಿ ಡಿವೈಎಸ್‍ಪಿ ಎಚ್.ಎಂ. ಶೈಲೇಂದ್ರ ತಿಳಿಸಿದರು.
ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರಿಂದ ದೂರು ಸ್ವೀಕರಿಸುವ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿರುವ ಬಗ್ಗೆ ದೂರುಗಳು ಹೆಚ್ಚಾಗಿದ್ದು, ಇದು ಲಂಚದ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಮೇಲಧಿಕಾರಿಗಳು ಮಧ್ಯವರ್ತಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹೀಗೆ ಮುಂದುವರಿದರೆ ಅಧಿಕಾರಿಗಳು ಜವಾಬ್ದಾರರಾಗಬೇಕಾಗುತ್ತದೆ ಎಂದು ಹೇಳಿದರು.
ಕಚೇರಿಗೆ ಹಾಜರಾಗುವ ಸಂದರ್ಭ ಅಧಿಕಾರಿಗಳು ಹಾಗು ನೌಕರರು ಹಣದೊಂದಿಗೆ ಕರ್ತವ್ಯಕ್ಕೆ ಹಾಜರಾಗಬಾರದು. ಹಣವಿದ್ದರೆ ಮುಂಚಿತವಾಗಿಯೇ ಸಕಾರಣ ಕೊಟ್ಟು ಡೈರಿಯಲ್ಲಿ ದಾಖಲಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಯಾವದೆ ಸರ್ಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದ್ದಲ್ಲಿ, ನಿರ್ಲಕ್ಷ್ಯತೆ ತೋರಿದಲ್ಲಿ, ಸಾರ್ವಜನಿಕರು ಎಸಿಬಿಗೆ ದೂರು ಸಲ್ಲಿಸಬಹುದು ಎಂದು ಹೇಳಿದರು.
ನೌಕರರು ಅಧಿಕಾರಿಗಳ ಹೆಸರು ಹೇಳಿಕೊಂಡು ಲಂಚ ಸ್ವೀಕರಿಸಿರುವದು ಸಾಬೀತಾದರೆ, ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವದು. ಅಧಿಕಾರಿಗಳು ಕೈಕೆಳಗಿನ ನೌಕರರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿಕೊಡಲೆಂದೇ ಸರ್ಕಾರಿ ನೌಕರರಿಗೆ ಸರ್ಕಾರ ಸಂಬಳ ಕೊಡುತ್ತದೆ. ಸಾರ್ವಜನಿಕರಿಂದ ಹಣದ ಬೇಡಿಕೆ ಇಡುವದು ಅಕ್ಷಮ್ಯ ಅಪರಾಧ. ಕಾನೂನು ಬಲಿಷ್ಠವಾಗಿದ್ದು, ಲಂಚಕೋರರು ಪ್ರತಿಸಲ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಂತರ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಭೆಯಲ್ಲಿ ತಹಸೀಲ್ದಾರ್ ವೀರೇಂದ್ರ ಬಾಡಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಚಿಟ್ಟಿಯಪ್ಪ, ಎಸಿಬಿ ಇನ್ಸ್‍ಪೆಕ್ಟರ್‍ಗಳಾದ ಎಂ.ಮಹೇಶ್, ಎಂ.ದೊಡ್ಡೇಗೌಡ ಉಪಸ್ಥಿತರಿದ್ದರು.