ಸೋಮವಾರಪೇಟೆ, ಏ. 16: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮನೆಕೊಪ್ಪ ಗ್ರಾಮದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದ್ದು, ಮುಂದಿನ 10 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಗ್ರಾಮದ ಶ್ರೀ ಸಬ್ಬಮ್ಮ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎನ್. ರಾಜಗೋಪಾಲ್, ತೋಳೂರುಶೆಟ್ಟಳ್ಳಿ ಜಂಕ್ಷನ್‍ನಿಂದ ದೊಡ್ಡಮನೆಕೊಪ್ಪ ಗ್ರಾಮದವರೆಗಿನ 3 ಕಿ.ಮೀ. ರಸ್ತೆ ತೀರಾ ಹಾಳಾಗಿದ್ದು, ಕಳೆದ ಬಾರಿಯ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ ಸಂದರ್ಭ ತಹಸೀಲ್ದಾರ್ ಭೇಟಿ ನೀಡಿ ರಸ್ತೆ ದುರಸ್ತಿಪಡಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದರು.

ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವ ಹಿನ್ನೆಲೆ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಶಾಲಾ ಕಾಲೇಜು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಆಟೋಗಳೂ ಸಹ ಗ್ರಾಮಕ್ಕೆ ಬರುತ್ತಿಲ್ಲ. ಈ ಬಗ್ಗೆ ತಾ.ಪಂ., ಜಿ.ಪಂ., ಶಾಸಕರು ಸೇರಿದಂತೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮದ ಮಕ್ಕಳನ್ನು ಲೋಕೋಪಯೋಗಿ ಇಲಾಖೆಯ ಕಚೇರಿಗೆ ತಂದು ಬಿಡುತ್ತೇವೆ. ಅಲ್ಲಿಂದಲೇ ಶಾಲಾ ಕಾಲೇಜಿಗೆ ತೆರಳಲು ಇಲಾಖೆ ಅನುವು ಮಾಡಿಕೊಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳಿಗೆ 35 ಲಕ್ಷ ರೂ. ಟೆಂಡರ್ ಆಗಿದ್ದು, ಗುತ್ತಿಗೆ ಪಡೆದಿರುವ ಜಯರಾಂ ಎಂಬವರು ಕಾಮಗಾರಿ ಪ್ರಾರಂಭಿಸುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಪ್ರಶ್ನಿಸಿದ್ದರೂ ಸ್ಪಂದಿಸುತ್ತಿಲ್ಲ ಎಂದು ರಾಜಗೋಪಾಲ್ ಆರೋಪಿಸಿದರು.

ಇದರೊಂದಿಗೆ ಕುಡಿಯುವ ನೀರಿಗಾಗಿ 2 ವರ್ಷದ ಹಿಂದೆ ಬೋರ್‍ವೆಲ್ ತೆಗೆದು, ಮೋಟಾರ್ ಅಳವಡಿಸಿದ್ದರೂ ಇಂದಿಗೂ ಪಂಚಾಯಿತಿ ವಶಕ್ಕೆ ಒಪ್ಪಿಸಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬಿಗಡಾಯಿಸಿದೆ. ಮುಂದಿನ 10 ದಿನಗಳ ಒಳಗೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ, ಚುನಾವಣೆಗಾಗಿ ಗ್ರಾಮಕ್ಕೆ ಮತಯಂತ್ರಗಳನ್ನು ತರುವದು ಬೇಡ. ನಾವುಗಳೆಲ್ಲರೂ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದರು.

ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಡಿ.ಎನ್. ಪ್ರಸನ್ನ, ಟಿ.ಎಂ. ದಿಲೀಪ್, ಡಿ.ಬಿ. ಚಂದ್ರಶೇಖರ್, ಕುಶಾಲಪ್ಪ, ಡಿ.ಜಿ. ಚಂದ್ರಶೇಖರ್ ಅವರುಗಳು ಉಪಸ್ಥಿತರಿದ್ದರು.