ಪೊನ್ನಂಪೇಟೆ, ಏ. 16: ಕಾಶ್ಮೀರದ ಕಥುವಾ ಎಂಬಲ್ಲಿ 8 ವರ್ಷ ಪ್ರಾಯದ ಮುಗ್ದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗೋಣಿಕೊಪ್ಪಲು ಸಂಯುಕ್ತ ಜಮಾಯತ್ (ಯು.ಜೆ.ಜಿ) ತೀವ್ರವಾಗಿ ಖಂಡಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ನಜೀರ್ ಅಹಮದ್ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಿಂದಾಗಿ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಪ್ರಜ್ಞಾವಂತ ನಾಗರೀಕ ಸಮಾಜ ಎಂದೂ ಒಪ್ಪದ ಈ ಅಮಾನುಷ ಘಟನೆ ಯಾರಿಗೂ ಶೋಭೆ ತರುವಂಥದ್ದಲ್ಲ.
ಆಸಿಫಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವವರಿಗೆ ಸರಿಯಾದ ಶಿಕ್ಷೆ ವಿಧಿಸಲೇಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿದ್ದ ಗೋಣಿಕೊಪ್ಪಲು ಸಂಯುಕ್ತ ಜಮಾಯತ್‍ನ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ಸಮದ್ ಮಾತನಾಡಿ, ದೇಶದಲ್ಲಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಸ್ಥೆಯ ಕೋಶಾಧಿಕಾರಿ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರು ಮಾತನಾಡಿ, ಮುಗ್ದ ಹೆಣ್ಣು ಮಕ್ಕಳ ಮತ್ತು ಶೋಷಿತರ ಮೇಲೆ ನಡೆಯುವ ದೌರ್ಜನ್ಯ ಮತ್ತು ಕೊಲೆ ಪ್ರಕರಣವನ್ನು ಸರಕಾರಗಳು ಇನ್ನಾದರೂ ಗಂಭೀರವಾಗಿ ಪರಿಗಣಿಸುವಂತಾಗಬೇಕು ಎಂದರು.
ಗೋಷ್ಠಿಯಲ್ಲಿ ಗೋಣಿಕೊಪ್ಪಲು ಸಂಯುಕ್ತ ಜಮಾಯತ್‍ನ ಉಪಾಧ್ಯಕ್ಷರಾದ ಕೆ.ಅಹಮದ್ ಮತ್ತು ನಿರ್ದೇಶಕರಾದ ಎ.ಹೆಚ್. ಕಲೀಮುಲ್ಲಾ ಅವರು ಉಪಸ್ಥಿತರಿದ್ದರು.