ಸೋಮವಾರಪೇಟೆ, ಏ. 16: ಅತ್ಯಾಚಾರ ಮತ್ತು ಹತ್ಯೆಯಂತಹ ದುಷ್ಕøತ್ಯಗಳನ್ನು ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು. ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕೆಂದು ಕರ್ನಾಟಕ ಸ್ಟೇಟ್ ಸುನ್ನಿ ಸ್ಟುಡೆಂಟ್ ಫೆಡರೇಷನ್‍ನ ಸೋಮವಾರಪೇಟೆ ಡಿವಿಜನ್ ಆಗ್ರಹಿಸಿದೆ.
ಪತ್ರಿಕಾಗೊಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಎಸ್‍ಎಸ್‍ಎಫ್‍ನ ಡಿವಿಜನ್ ಅಧ್ಯಕ್ಷ ತಣ್ಣೀರುಹಳ್ಳದ ಶಾಫಿ ಸಅದಿ, ಕಾಶ್ಮೀರದ ಕತುವಾದಲ್ಲಿ ನಡೆದ ಮುಗ್ದಬಾಲೆ ಆಸಿಫಾ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ, ಗುಜರಾತ್‍ನ ಸೂರತ್, ಉತ್ತರಪ್ರದೇಶದ ಉನ್ನೋವಾದಲ್ಲಿ ನಡೆದ ಪ್ರಕರಣಗಳು ಖಂಡನೀಯವಾಗಿದ್ದು, ದೇಶವೇ ತಲೆತಗ್ಗಿಸುವಂತಾಗಿದೆ ಎಂದರು.
ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಅದಿಕವಾಗುತ್ತಿದ್ದು, ಇದಕ್ಕೆ ತಡೆಯೊಡ್ಡಬೇಕಾದ ಅನಿವಾರ್ಯತೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಶಾಫಿ ಆಗ್ರಹಿಸಿದರು.
ಆಸಿಫಾ ಸೇರಿದಂತೆ ಎಲ್ಲಾ ಅತ್ಯಾಚಾರ ಪ್ರಕರಣಗಳ ದುಷ್ಟರಿಗೆ ಜಾತಿ, ಮತ, ಧರ್ಮದ ಭೇದ ಇಲ್ಲದೇ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ ಗಲ್ಲಿಗೇರಿಸಬೇಕು. ಹಾಗಾದಾಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಎಸ್‍ಎಸ್‍ಎಫ್ ಒತ್ತಾಯಿಸುತ್ತಿದ್ದು, ರಾಜ್ಯದ ಎಲ್ಲಾ ಶಾಖೆಗಳಿಂದಲೂ ಹೋರಾಟ ನಡೆಯುತ್ತಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಮುಖಂಡ ಕೊಡ್ಲಿಪೇಟೆಯ ಅಝೀಜ್ ಸಖಾಫಿ, ಆಲಿ ಸಖಾಫಿ, ಸಮದ್ ನಿಜಾಮಿ, ಖಾದರ್ ಕರ್ಕಳ್ಳಿ ಉಪಸ್ಥಿತರಿದ್ದರು.