ಮಡಿಕೇರಿ,ಏ.16: ಮತದಾನದ ಜಾಗೃತಿ ಸಾರುವ ಬೃಹತ್ ಕ್ಯಾನ್ವಸ್ ನ್ನು ರಾಜಾಸೀಟ್ ನಲ್ಲಿ ಕಲಾವಿದ ಬಿ.ಆರ್.ಸತೀಶ್ ಅನಾವರಣ ಗೊಳಿಸುವ ಮೂಲಕ ವಿಶ್ವಚಿತ್ರಕಲಾ ದಿನದಂದು ವಿಭಿನ್ನವಾಗಿ ಮತದಾನದ ಮಹತ್ವದ ಸಂದೇಶ ಸಾರಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಆಯೋಜಿತ ವಿಶ್ವಕಲಾ ದಿನಾಚರಣೆ ಅಂಗವಾಗಿ ಮತದಾನದ ಮಹತ್ವ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳ 54 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಹೆಸರಾಂತ ಕಲಾವಿದ ಬಿ.ಆರ್.ಸತೀಶ್ ಕುಂಚದಲ್ಲಿ ಐದು ಬೆರಳುಗಳು ಮತ್ತು ಮತ ಹಾಕಿದ ಸಂಕೇತವಾಗಿ ಬೆರಳೊಂದಕ್ಕೆ ಶಾಹಿ ಗುರುತು ಹಾಕಿದ ಚಿತ್ರವು ಬೃಹತ್ ಹಾಳೆಯಲ್ಲಿ ರಚಿತಗೊಂಡಿತು. ಈ ಬೃಹತ್ ಕ್ಯಾನ್ವಸ್ಗೆ ಪ್ರವಾಸಿಗರೂ ಸೇರಿದಂತೆ ನೂರಾರು ಜನರು ಸಹಿ ಹಾಕುವ ಮೂಲಕ ನನ್ನ ಮತ ನನ್ನ ಹಕ್ಕು ಎಂಬ ಸಂದೇಶಕ್ಕೆ ಸಹಮತ ನೀಡಿದರು.
ಚಿತ್ರಕಲಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕಲಾವಿದರು ಸದಾ ವಿನೂತನ ಪರಿಕಲ್ಪನೆಯನ್ನೇ ಚಿಂತಿಸಬೇಕಾಗುತ್ತದೆ. ಅನೇಕ ಸಮಸ್ಯೆಗಳ ನಡುವೇ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಜನರನ್ನು ಭಾವನೆಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ ಎಂದು ಕಲಾವಿದರನ್ನು ಶ್ಲಾಘಿಸಿದರು.
ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಶ್ಲಾಘನೀಯ, ಚುನಾವಣೆ ಸಂದರ್ಭ ಮತದಾನದ ಮಹತ್ವದ ಬಗ್ಗೆ ಮಕ್ಕಳಿಗೆ ಕಲಾ ಸ್ಪರ್ಧೆ ಆಯೋಜಿಸಿರುವದು ಅರ್ಥಪೂರ್ಣ ಎಂದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಎರಡನೇ ವರ್ಷ ರಾಜಾಸೀಟ್ನಲ್ಲಿ ವಿಶ್ವಕಲಾ ದಿನವನ್ನು ಆಯೋಜಿಸಲಾಗುತ್ತಿದ್ದು, ಮಕ್ಕಳಲ್ಲಿರುವ ಕಲಾ ಪ್ರತಿಭೆ ಪ್ರೋತ್ಸಾಹಿಸಲು ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಜೋನಲ್ ಲೆಫ್ಟಿನೆಂಟ್ ವಿನೋದ್ ಕುಶಾಲಪ್ಪ, ಮಹೇಶ್, ಜಾನಪದ ಪರಿಷತ್ ನಿರ್ದೇಶಕಿ ಸುಳ್ಳಿಮಾಡ ಗೌರು ನಂಜಪ್ಪ, ಅರುಣ ಸ್ಟೋರ್ಸ್ ಮಾಲೀಕ ಎಂ.ಕೆ.ಅರುಣ್, ಜಾನಪದ ಪರಿಷತ್ ಜಿಲ್ಲಾ ಖಜಾಂಚಿ ಎಸ್.ಎಸ್.ಸಂಪತ್ ಕುಮಾರ್, ಮಿಸ್ಟಿ ಹಿಲ್ಸ್ ನ ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್.ರವಿಶಂಕರ್, ಜಾನಪದ ಪರಿಷತ್ ತಾಲೂಕು ಕಾರ್ಯದರ್ಶಿ ಸಂಗೀತಾ ಪ್ರಸನ್ನ, ಖಜಾಂಜಿ ಎ.ಕೆ.ನವೀನ್, ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಎಂ.ಧನಂಜಯ್, ಸತೀಶ್ ಸೋಮಣ್ಣ, ಲೀನಾ ಪೂವಯ್ಯ, ಸವಿತಾ ಅರುಣ್, ಶುಭಾ ವಿಶ್ವನಾಥ್ , ಕಾಂಗೀರ ಸತೀಶ್ , ಶಶಿಮೊಣ್ಣಪ್ಪ ಪಾಲ್ಗೊಂಡಿದ್ದರು.