ಮಡಿಕೇರಿ, ಏ. 16: ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವದಾಗಿ ಭರವಸೆ ನೀಡಿದ ಕಾಂಗ್ರೆಸ್ ವರಿಷ್ಠರು ಕೊನೆಯ ಘಳಿಗೆಯಲ್ಲಿ ಮೋಸ ಮಾಡಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ಮನನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವದಾಗಿ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ. ತಾನು ಹಾಗೂ ಅವಳಿ ಸೋದರ ನಾಪಂಡ ಎಂ. ಮುದ್ದಪ್ಪ ವಿದ್ಯಾರ್ಥಿ ಜೀವನದಿಂದಲೇ ಪಕ್ಷಕ್ಕಾಗಿ ಶ್ರಮಿಸುತ್ತಾ ಅನೇಕ ಹೊಣೆಗಾರಿಕೆ ನಿಭಾಯಿಸುತ್ತಾ ಬಂದಿರುವದಾಗಿ ಅವರು ಬೊಟ್ಟು ಮಾಡಿದರು.

ಈ ಹಿನ್ನೆಲೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷವನ್ನು ತಮ್ಮ ಹಣ ಖರ್ಚು ಮಾಡಿ ಕಟ್ಟಿ ಬೆಳೆಸಲು ಮುಂದಾಗಿರುವಾಗ, ಪಕ್ಷಕ್ಕಾಗಿ ಏನೂ ಮಾಡದ ವ್ಯಕ್ತಿಗೆ ಟಿಕೆಟ್ ನೀಡಿರುವದಕ್ಕಾಗಿ ಕಾರ್ಯಕರ್ತರ ಒತ್ತಾಯದಂತೆ ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆಗಿಳಿಯುವೆ ಎಂದ ಮುತ್ತಪ್ಪ ತಾ. 20 ರಂದು ಉಮೇದುವಾರಿಕೆ ಸಲ್ಲಿಸುವದಾಗಿ ಘೋಷಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲದಂತಾಗಿದ್ದು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ವಲಸಿಗರಿಗೆ ಮಣೆ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧೆ

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಳೆದ ಚುನಾವಣೆಯಲ್ಲಿ ಬಯಸಿದಾಗ, ಪಕ್ಷದ ವರಿಷ್ಠರು ಪ್ರಾಯ ಕಿರಿದಾಗಿದ್ದು, ಮುಂದಿನ ಅವಧಿಗೆ ಅವಕಾಶ ನೀಡುವದಾಗಿ ಆಶ್ವಾಸನೆ ಮೇರೆಗೆ ಪಕ್ಷಕ್ಕಾಗಿ ಶ್ರಮಿಸತೊಡಗಿದ್ದಾಗಿ ವಿವರಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ವಕೀಲ ಚಂದ್ರಮೌಳಿ ಅವರಿಗೆ ಟಿಕೆಟ್ ನೀಡಲಾಯಿತು. ಈಗ ಮತ್ತೆ ವಿಧಾನಸಭೆಗೂ ಅವರನ್ನೇ ಅಭ್ಯರ್ಥಿ ಮಾಡುವ ಅಗತ್ಯವೇನಿತ್ತು? ಎಂದು ಖಾರವಾಗಿ ಪ್ರಶ್ನಿಸಿದರು. ಈಗಾಗಲೇ ಆರು ತಿಂಗಳಿನಿಂದ ತಾನು ವರಿಷ್ಠರ ಸೂಚನೆಯಂತೆ ಗ್ರಾಮ ಗ್ರಾಮಗಳಲ್ಲಿ ತಯಾರಿ ನಡೆಸಿರುವದಾಗಿ ಮುತ್ತಪ್ಪ ನುಡಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವ್ಯಕ್ತಿ ಇದುವರೆಗೆ ಯಾವದೇ ಸಂದರ್ಭ ಪಕ್ಷಕ್ಕಾಗಿ ಕೆಲಸ ಮಾಡಿಲ್ಲವೆಂದು ಟೀಕಿಸಿದ ಅವರು, ಗ್ರಾಮ ಪಂಚಾಯಿತಿಯಿಂದ ಸಂಸತ್ತ್‍ನ ತನಕ ನಡೆದಿರುವ ಯಾವೊಂದು ಚುನಾವಣೆಯಲ್ಲಿ ಏನೇನೂ ಮಾಡಿಲ್ಲವೆಂದು ಮಾರ್ನುಡಿದರಲ್ಲದೆ, ಎಲ್ಲ ಸಂದರ್ಭ ತಾನು ಹಣ ವ್ಯಯಿಸುವ ಮೂಲಕ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ಸಮರ್ಥಿಸಿಕೊಂಡರು.

ಜಿಲ್ಲೆಗೆ ಮುಖ್ಯಮಂತ್ರಿ ಭೇಟಿಯ ಸಾಧನಾ ಸಮಾವೇಶ ಸಂದರ್ಭ ಸಹಿತ ಎಲ್ಲ ಹಂತದಲ್ಲಿ ತಾನು ಹಣ ಖರ್ಚು ಮಾಡಿ ವ್ಯವಸ್ಥೆ ರೂಪಿಸಲು ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ವರಿಷ್ಠರ ಸಹಿತ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕೂಡ ಆಶ್ವಾಸನೆ ನೀಡುತ್ತಾ ಬಂದಿದ್ದಾಗಿ ನೆನಪಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ತಾನು ಚುನಾವಣಾ ತಯಾರಿಯೊಂದಿಗೆ 36 ಸಾವಿರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡಿರುವದಾಗಿ ನುಡಿದ ಅವರು, ಜಿಲ್ಲೆಯಲ್ಲಿ ಗ್ರಾಮೀಣ ಜನತೆಯ ಒಡನಾಟವೂ ಸೇರಿದಂತೆ ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗದ ನಡುವೆ ಕೆಲಸ ಮಾಡಿರುವ ಅನುಭವ ತನಗಿದೆ ಎಂದರು.

ನಿರಂತರ ಮೋಸ: ವಿಧಾನ ಪರಿಷತ್ತಿಗೆ ಹೊರಗಿನ ವ್ಯಕ್ತಿಯನ್ನು ಕಣಕ್ಕಿಳಿಸುವಾಗ, ತಾನು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಕೊಡಲಿಲ್ಲವೆಂದ ಮುತ್ತಪ್ಪ, ಬಳಿಕ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡುವದಾಗಿ ನಂಬಿಸಿ ಕೊನೇ ಘಳಿಗೆಯಲ್ಲಿ ಬೇರೆಯವರನ್ನು ಮಾಡಿದರೆಂದು ಕಿಡಿಕಾರಿದರು. ಪ್ರಸಕ್ತ ಮತ್ತೆ ಮೋಸ ಮಾಡಿದ್ದು, ಚುನಾವಣಾ ಸ್ಪರ್ಧೆಯ ನಿರ್ಧಾರದಿಂದ ಯಾವ ಕಾರಣಕ್ಕೂ ಹಿಂದೆ ಸರಿಯಲಾರೆ ಎಂದು ಘೋಷಿಸಿದರು.

ಅವಳಿ ಸೋದರರಾದ ತಾನು ಮತ್ತು ಮುದ್ದಪ್ಪ ನಿರಂತರವಾಗಿ ಕಾಂಗ್ರೆಸ್ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದು, ತಕ್ಷಣಕ್ಕೆ ತಾನು ಕಾಂಗ್ರೆಸ್ ತೊರೆದಿದ್ದು, ಮುಂದೆ ಮುದ್ದಪ್ಪ ಸೂಕ್ತ ಸಂದರ್ಭ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸುಳಿವು ನೀಡಿದರು.