ಮಡಿಕೇರಿ, ಏ. 16: ಇದುವರೆಗೂ ಚಾತಕ ಪಕ್ಷಿಯಂತೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯನ್ನು ಎದುರು ನೋಡುತ್ತಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಎಐಸಿಸಿ ಅಧಿಕೃತ ಟಿಕೆಟ್ ಘೋಷಿಸಿದ ಬಳಿಕ ಭಿನ್ನಮತ ಭುಗಿಲೇಳುವಂತಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳು ಆಕಾಂಕ್ಷಿ ಗಳಾಗಿದ್ದರೂ ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಅವರ ಆಯ್ಕೆಯನ್ನು ನಿನ್ನೆ ಪಕ್ಷದ ಹೈಕಮಾಂಡ್ ಘೋಷಿಸಿದ ಬಳಿಕ ಮತ್ತೋರ್ವ ಪ್ರಬಲ ಆಕಾಂಕ್ಷಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ತೀವ್ರ ಅಸಮಾಧಾನ ಗೊಂಡಿದ್ದು, ಅವರನ್ನು ಅನ್ಯ ಪಕ್ಷದವರು ಸಂಪರ್ಕಿಸಿರುವದಾಗಿ ತಿಳಿದುಬಂದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂಲತಃ ಕೊಡ್ಲಿಪೇಟೆಯವರಾದ ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿಪರ ರಾಗಿರುವ ಹೆಚ್.ಎಸ್. ಚಂದ್ರಮೌಳಿ ಅವರ ಆಯ್ಕೆ ಮಡಿಕೇರಿ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಗೊಳಿಸಿದೆ.ಈ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಐಎನ್‍ಟಿಯುಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರೂ ಆಗಿರುವ ನಾಪಂಡ ಮುತ್ತಪ್ಪ ಅವರು ಚಂದ್ರಮೌಳಿಯವರ ಆಯ್ಕೆಯನ್ನು ಪ್ರಬಲವಾಗಿ ವಿರೋಧಿಸಿ ಕಾಂಗ್ರೆಸ್ ಹೈಕಮಾಂಡ್‍ಗೆ ತಿರುಗೇಟು ನೀಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದು, ಇದೇ ತಾ. 20ರಂದು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಸೆಡ್ಡು ಹೊಡೆಯಲಿದ್ದಾರೆ.ಇದುವರೆಗೂ ಹಲವು ವರ್ಷ ಗಳಿಂದ ತಾನು ಪಕ್ಷವನ್ನು ಸಂಘ ಟಿಸಿದ್ದು, ಇದೀಗ ಚುನಾವಣೆಗೂ ಮುನ್ನ ಮಡಿಕೇರಿ ಕ್ಷೇತ್ರದಲ್ಲಿ ಎಲ್ಲಾ ಕಡೆ ಬೂತ್ ಸಮಿತಿಗಳನ್ನು ರಚಿಸಲು ಸಂಘಟನೆ ನಡೆಸಿದ್ದೆ. ಆದರೆ ಸಚಿವ ಕೆ.ಜೆ. ಜಾರ್ಜ್ ಅವರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪರ ವಾದಿಸುತ್ತಿರುವ ವಕೀಲ ಚಂದ್ರಮೌಳಿ ಅವರ ಋಣ ತೀರಿಸುವ ಸಲುವಾಗಿ ಅವರಿಗೆ ಹೈಕಮಾಂಡ್ ಮೂಲಕ ಅಭ್ಯರ್ಥಿ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಈ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆ ಯಲ್ಲಿಯೂ ಚಂದ್ರಮೌಳಿಯವರಿಗೆ ಟಿಕೆಟ್ ನೀಡಿದ್ದು, ಅವರು ಪರಾಭವ ಗೊಂಡಿದ್ದರೂ ಮತ್ತೊಮ್ಮೆ ಅವರಿಗೆ ಅವಕಾಶ ನೀಡಿದ್ದಾರೆ. ಆ ಚುನಾವಣೆ ಯಲ್ಲಿ ಅತ್ಯಲ್ಪ ಮತದಾರರಿದ್ದು, ಈಗಿನ ಚುನಾವಣೆಯಲ್ಲಿ (ಮೊದಲ ಪುಟದಿಂದ) ಸಾವಿರಾರು ಮಂದಿ ಮತದಾರರಿರುವಾಗ ಸ್ಥಳೀಯ ಸಂಪರ್ಕ ಹೊಂದಿರದ ಚಂದ್ರಮೌಳಿ ಜಯಗಳಿಸುವದು ಅಸಾಧ್ಯದ ಮಾತು. ತನಗಲ್ಲದಿದ್ದರೂ ಇತರ ಆಕಾಂಕ್ಷಿಗಳಾಗಿದ್ದ ಕೆ.ಎಂ. ಲೋಕೇಶ್, ಕೆ.ಪಿ. ಚಂದ್ರಕಲಾ ಅಥವಾ ಕುಮುದಾ ಧರ್ಮಪ್ಪ ಇವರುಗಳಿಗೆ ಅವಕಾಶ ನೀಡಿದ್ದರೂ ತಾನು ಸಂಪೂರ್ಣ ಬೆಂಬಲ ನೀಡುತ್ತಿದ್ದೆ. ಆದರೆ ಪಕ್ಷದ ಹಿತದೃಷ್ಟಿಯಿಲ್ಲದೆ ವೈಯಕ್ತಿಕ ಕಾರಣಗಳಿಗಾಗಿ ನಡೆದಿರುವ ಈ ಆಯ್ಕೆ ವಿಷಾದಕರ. ಗೆಲವಿಗೆ ಪಕ್ಷದ ಪ್ರಭಾವ ಎಷ್ಟು ಮುಖ್ಯವೋ ಅಭ್ಯರ್ಥಿಯ ವರ್ಚಸ್ಸು ಸ್ಥಳೀಯ ಜನರ ಬೆಂಬಲ ಸಂಪರ್ಕಗಳೂ ಕೂಡ ಅತ್ಯಗತ್ಯ ಎಂದು ನಾಪಂಡ ಮುತ್ತಪ್ಪ ಅಭಿಪ್ರಾಯಪಟ್ಟರು.
ಚಂದ್ರಕಲಾ ಅಸಮಾಧಾನ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಚಂದ್ರಮೌಳಿ ಅವರ ಆಯ್ಕೆಯ ಬಗ್ಗೆ ಅವರು ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದರು.
ನಾವೆಲ್ಲ ಪಕ್ಷದಲ್ಲಿ ಕೂಲಿಗಳಾಗಿ ಮಾತ್ರ ಕೆಲಸ ಮಾಡುವಂತಾಗಿದೆ. ನಮ್ಮ ಸೇವೆಯನ್ನು ಪರಿಗಣಿಸಿ ಮೇಲ್ಮಟ್ಟಕ್ಕೇರಿಸುವ, ಗುರುತಿಸುವ ಕಾರ್ಯಮಾತ್ರ ಪಕ್ಷ ಮಾಡುತ್ತಿಲ್ಲ. ನಾಪಂಡ ಮುತ್ತಪ್ಪ ಅಥವಾ ಲೋಕೇಶ್ ಅವರನ್ನು ಆಯ್ಕೆ ಮಾಡಿದ್ದರೂ ತನಗೆ ಸಮಾಧಾನವಾಗುತ್ತಿತ್ತು ಎಂದು ಅವರು ಮುಕ್ತ ನುಡಿಯಾಡಿದರು. ಸಚಿವರೊಬ್ಬರ ನ್ಯಾಯಾಲಯ ವ್ಯವಹಾರಕ್ಕಾಗಿ ಅಂತಹವರನ್ನು ರಾಜಕಾರಣಕ್ಕೆ ಇಳಿಸುವ ತೀರ್ಮಾನ ಕಾಂಗ್ರೆಸ್‍ಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ಮುನ್ನೆಚ್ಚರಿಕೆಯಿತ್ತರು. ಈಗಾಗಲೇ ವಿಧಾನಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿರುವ ಅಭ್ಯರ್ಥಿಯನ್ನು ಮತ್ತೆ ಪರಿಗಣಿಸಿರುವದು ಖೇದಕರ. ನಿನ್ನೆ ರಾತ್ರಿಯೆ ತನ್ನ ಹಿರಿಯ ಸಹೋದರನೊಂದಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಕ್ಷದ ಈ ತೀರ್ಮಾನದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವದಾಗಿ ಚಂದ್ರಕಲಾ ವಿವರಿಸಿದರು.
ಮುದ್ದಪ್ಪ ಆಕ್ರೋಶÀ ನುಡಿ
ಈ ನಡುವೆ ನಾಪಂಡ ಮುತ್ತಪ್ಪ ಅವರ ಸಹೋದರ ನಾಪಂಡ ಮುದ್ದಪ್ಪ ಅವರು ಫೇಸ್‍ಬುಕ್ ಸಂದೇಶವೊಂದರಲ್ಲಿ ಹೈಕಮಾಂಡ್ ನಿರ್ಧಾರದ ಬಗ್ಗೆ ಕಟುಟೀಕೆ ವ್ಯಕ್ತಪಡಿಸಿದ್ದಾರೆ. ಚಂದ್ರಮೌಳಿಯವರಿಗೆ ಠೇವಣಿ ಉಳಿಸಿಕೊಳ್ಳುವದೂ ಕಷ್ಟ ಎಂದು ಛೇಡಿಸಿದ್ದಾರೆ. ಕೆ.ಜೆ. ಜಾರ್ಜ್ ನಿರ್ಧಾರವನ್ನು ಟೀಕಿಸಿರುವ ಅವರು ದುರಹಂಕಾರಕ್ಕೆ ತಕ್ಕ ಪಾಠವನ್ನು ಕೊಡಗಿನ ಜನ ಕಲಿಸಲಿದ್ದಾರೆ ಎಂದು ಮುನ್ನೆಚ್ಚರಿಕೆಯಿತ್ತಿದ್ದಾರೆ.
ಕೆ.ಎಂ. ಲೋಕೇಶ್ ನಿಲುವು
ಸೋಮವಾರಪೇಟೆ : ವಿಧಾನ ಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಹೈಕೋರ್ಟ್ ವಕೀಲ ಚಂದ್ರಮೌಳಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ, ಕಳೆದ ಅನೇಕ ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕೀಯ ಕೃಷಿ ಮಾಡಿಕೊಂಡು ಬರುತ್ತಿರುವ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 32 ಸಾವಿರ ಮತಗಳನ್ನು ಗಳಿಸಿ ಪರಾಜಯಗೊಂಡಿದ್ದ ಕೆ.ಎಂ. ಲೋಕೇಶ್ ಪ್ರಸಕ್ತ ಚುನಾವಣೆಯಲ್ಲೂ ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದೀಗ ಟಿಕೇಟ್ ಕೈತಪ್ಪಿರುವದರಿಂದ ಅಸಮಾಧಾನ ಹೊರಹಾಕಿರುವ ಲೋಕೇಶ್, ಮುಂದಿನ 5 ದಿನಗಳ ಒಳಗೆ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುವದಾಗಿ ತಿಳಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿರುವ ಲೋಕೇಶ್, ತಾನು ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದು, ಗ್ರಾ.ಪಂ. ಸದಸ್ಯ, ತಾ.ಪಂ. ಅಧ್ಯಕ್ಷ ಸೇರಿದಂತೆ ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿಯೂ ಪಕ್ಷ ಸಂಘಟನೆ ಮಾಡಿದ್ದೇನೆ. ಈ ಹಿಂದೆ ಬಿ.ಎ. ಜೀವಿಜಯ ಕಾಂಗ್ರೆಸ್ ತೊರೆದ ಸಂದರ್ಭ ಸಂಕಷ್ಟದಲ್ಲಿದ್ದ ಪಕ್ಷಕ್ಕೆ ಮರುಜೀವ ನೀಡುವಲ್ಲಿ ತನ್ನ ಪಾಲಿದೆ. ಕಳೆದ ಬಾರಿ ಸರ್ಕಾರವಿಲ್ಲದಿದ್ದ ಸಂದರ್ಭ ಚುನಾವಣೆಗೆ ಕೇವಲ 17 ದಿನಗಳಿರುವಾಗ ಟಿಕೆಟ್ ಪಡೆದು 32 ಸಾವಿರಕ್ಕೂ ಅಧಿಕ ಮತಗಳಿಸಿದ್ದೇನೆ. ಇದೀಗ ತನ್ನನ್ನು ಪರಿಗಣಿಸದಿರುವದು ಬೇಸರ ತರಿಸಿದೆ ಎಂದಿದ್ದಾರೆ.
ಸರ್ಕಾರ ಇಲ್ಲದಿದ್ದ ಸಂದರ್ಭವೂ ಪಕ್ಷ ಸಂಘಟನೆ ಮಾಡಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಅಂತಹ ಸಂದರ್ಭದಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸದವರನ್ನು ಟಿಕೆಟ್‍ಗೆ ಪರಿಗಣಿಸಿರುವದು ಸರಿಯಲ್ಲ, ಇದೀಗ ಸರ್ಕಾರವಿದ್ದು, ಪಕ್ಷ ಸಂಘಟನೆಯೂ ಉತ್ತಮವಾಗಿರುವ ಹಿನ್ನೆಲೆ ಸ್ಥಳೀಯ ಆಕಾಂಕ್ಷಿಗಳ ಗಮನಕ್ಕೆ ತಾರದೇ ಟಿಕೆಟ್ ಘೋಷಣೆ ಮಾಡಿರುವದು ಸರಿಯಲ್ಲ. ಈ ಬಗ್ಗೆ ವರಿಷ್ಠರ ಗಮನ ಸೆಳೆದಿದ್ದೇನೆ. ಮುಂದಿನ 5 ದಿನಗಳ ಒಳಗೆ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಲೋಕೇಶ್ ಅಸಮಾಧಾನ ಹೊರಹಾಕಿದ್ದಾರೆ.
ಸಂಘಟನೆ ಘೋಷಣೆ
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಐಎನ್‍ಟಿಯುಸಿಯ ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಅವರಿಗೆ ಟಿಕೆಟ್ ಕೈ ತಪ್ಪಿರುವದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವದಾಗಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಟಿ.ಪಿ.ಹಮೀದ್ ತಿಳಿಸಿದ್ದಾರೆ.
ಏಪ್ರಿಲ್ 20 ರಂದು ಮಧ್ಯಾಹ್ನ 12.30ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮುತ್ತಪ್ಪ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಮುತ್ತಪ್ಪ ಅವರ ಗೆಲವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಬಹುದು, ಆದರೆ ಕಾರ್ಮಿಕ ಸಂಘಟನೆಯಿಂದ ಹೊರ ಹಾಕಲು ಸಾಧ್ಯವಿಲ್ಲವೆಂದರು. ಸಂಘÀಟನೆಯ ಇತರ ಪದಾಧಿಕಾರಿಗಳು ಮಾತನಾಡಿ, ಮುತ್ತಪ್ಪ ಅವರಿಗೆ ಟಿಕೆಟ್ ತಪ್ಪಲು ಜಿಲ್ಲಾ ಕಾಂಗ್ರೆಸ್‍ನ ಪ್ರಮುಖರು ಹಾಗೂ ಒಳ ಒಪ್ಪಂದ ಮಾಡಿಕೊಂಡಿರುವ ಬಿಜೆಪಿ ಕಾರಣವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ಅಜ್ಜಳ್ಳಿ, ಹೊಸಬೀಡು ಹೂವಯ್ಯ, ಪವನ್ ಪೆಮ್ಮಯ್ಯ, ತ್ರಿನೇಶ್ ಹಾಗೂ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಹರೀಶ್ ತೀವ್ರ ಅಸಮಾಧಾನ
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಲ್ಲಿ ಓರ್ವರಾಗಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ, ತನಗೆ ಟಿಕೆಟ್ ದೊರಕದಿರುವದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಆಪ್ತರಾಗಿರುವ ಹರೀಶ್, ತಾನು ಇದುವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಜಿಲ್ಲೆಯ ಅಭಿವೃದ್ಧಿಯತ್ತ ಮಾತ್ರ ಸಚಿವರ ಪರವಾಗಿ ಆಸಕ್ತಿ ವಹಿಸಿ ಕೆಲಸ ಮಾಡಿರುವ ಸಂತೃಪ್ತಿಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತನಗೆ ಟಿಕೆಟ್ ಲಭಿಸದಿದ್ದಾಗ, ಅನೇಕ ಅಭಿಮಾನಿ ಕಾರ್ಯಕರ್ತರು ದೂರವಾಣಿ ಮೂಲಕ ಅಸಮಾಧಾನ ಪಟ್ಟಿರುವದಾಗಿ ತಿಳಿಸಿದರು.