ಸುಂಟಿಕೊಪ್ಪ, ಏ. 16 : ನಾವು ನೀರನ್ನು ಪೋಲು ಮಾಡದೆ ಹನಿ ನೀರನ್ನು ಉಳಿಸುವ ಮೂಲಕ ಭವಿಷ್ಯಕ್ಕಾಗಿ ಜೀವಜಲವನ್ನು ಸಂರಕ್ಷಿಸಲು ಬದ್ಧರಾಗಬೇಕಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಟಿ. ಜಿ. ಪ್ರೇಮಕುಮಾರ್ ಹೇಳಿದರು.

ಸುಂಟಿಕೊಪ್ಪ ಹೋಬಳಿಯ ಆರ್.ಎಸ್.ಚೆಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಯೋಜನೆಯಡಿ ಇಕೋ–ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ ನೀರಿನ ಮಿತ ಬಳಕೆಯ ಮಹತ್ವ ಕುರಿತು ಮಾತನಾಡಿದರು.

ನದಿ, ಕೆರೆ ಮತ್ತಿತರ ಜಲಮೂಲಗಳ ರಕ್ಷಣೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ನಾವು ಜಾಗೃತಿ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಅರಣ್ಯಗಳು ನಮ್ಮ ಅಮೂಲ್ಯ ಪರಿಸರ ವ್ಯವಸ್ಥೆಗಳಲ್ಲಿ ಪ್ರಮುಖವಾಗಿವೆ. ಪ್ರತಿಯೊಬ್ಬರೂ ನೆಲ-ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವ- ವೈವಿಧ್ಯ ಸಂರಕ್ಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ನಮ್ಮ ಅರಣ್ಯ ವನ್ಯಜೀವಿಗಳು ಸೇರಿದಂತೆ ಜೀವ-ವೈವಿಧ್ಯ ಸಂರಕ್ಷಣೆಗೆ ಅಗತ್ಯ ಗಮನಹರಿಸದಿದ್ದಲ್ಲಿ ಭವಿಷ್ಯದಲ್ಲಿ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರೇಮಕುಮಾರ್ ಹೇಳಿದರು.

‘ಸ್ವಚ್ಚ ಭಾರತ’ ಅಭಿಯಾನ ಯೋಜನೆಯಡಿ ಸ್ವಚ್ಚತೆಯೆಡೆಗೆ ನಮ್ಮ ಹೆಜ್ಜೆ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ಸ್ವಚ್ಚ ಪರಿಸರ ನಿರ್ಮಾಣಕ್ಕೆ ದೃಢಸಂಕಲ್ಪ ಹೊಂದಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಡಿ.ಪಿ.ಸರೋಜಿನಿ, ವಿದ್ಯಾರ್ಥಿಗಳು ತಮ್ಮನ್ನು ಚಿಕ್ಕಂದಿನಿಂದಲೇ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್‍ನ ಸಂಚಾಲಕರೂ ಆದ ಟಿ.ಜಿ.ಟಿ. ಶಿಕ್ಷಕ ಜಿ.ಮಂಜುನಾಥ್, ಶಾಲಾ ಸ್ವಚ್ಛ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಶಿಕ್ಷಕಿಯರಾದ ಐರಿಸ್ ಡೆಸ, ಕಾಂಚನ ಕುಮಾರಿ, ರೋಸ್ಲಿನ್ ರೋಚ ಇದ್ದರು. ನಂತರ ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಘೋಷಣೆಗಳನ್ನು ಪ್ರಚಾರ ಮಾಡಿದರು. ನಂತರ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.