ಹೆಬ್ಬಾಲೆ, ಏ. 16 : ನಡೆದಾಡುವ ದೇವರು ಎಂದೇ ಕರೆಯುವ ತುಮಕೂರು ಸಿದ್ಧಗಂಗಾ ಮಠದ ಹಿರಿಯ ಸ್ವಾಮೀಜಿ ಶ್ರೀ ಶಿವಕುಮಾರ ಸ್ವಾಮಿಗಳ 111ನೇ ಜನ್ಮದಿನೋತ್ಸವದ ಅಂಗವಾಗಿ ಸೋಮವಾರ ತೊರೆನೂರು ಗ್ರಾಮದಲ್ಲಿ ಶ್ರೀಗಳ ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸ ಲಾಯಿತು.
ತೊರೆನೂರು ವೀರಶೈವ ಪುರುಷರ ಸ್ವಸಹಾಯ ಸಂಘ ಮತ್ತು ವೀರಶೈವ ಸಮಾಜದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಲಂಕೃತ ಎತ್ತಿನಗಾಡಿಯಲ್ಲಿ ಶ್ರೀಗಳ ಭಾವಚಿತ್ರವನ್ನು ಸ್ಥಾಪಿಸಿ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಪವಿತ್ರ ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿ ನಂತರ ಪೂರ್ಣಕುಂಭ ಕಳಶದೊಂದಿಗೆ ಆರಂಭಗೊಂಡ ವರ್ಣರಂಜಿತ ಮೆರವಣಿಗೆಗೆ ಕೊಡ್ಲಿಪೇಟೆ ಶ್ರೀಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಬಸವಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ತೊರೆನೂರು ಬಸವೇಶ್ವರ ದೇವಸ್ಥಾನದಿಂದ ವಾದ್ಯಗೋಷ್ಠಿ ಗಳಿಂದಿಗೆ ಹೊರಟ ಮೆರವಣಿಗೆ ವೀರಶೈವ ಸಮಾಜದ ಸಮುದಾಯ ಭವನದ ಬಳಿ ಅಂತ್ಯಗೊಂಡಿದ್ದು, ಮೆರವಣಿಗೆ ಸಂದರ್ಭ ಗ್ರಾಮದ ಜನರು ಶಿವಕುಮಾರ ಸ್ವಾಮೀಜಿಗಳಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಅರ್ಚಕ ಚಂದ್ರಶೇಖರ್ ಶ್ರೀಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಗಳ 111ನೇ ಜನ್ಮದಿನ ಅಂಗವಾಗಿ 111 ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗುವ ಮೂಲಕ ಮೆರಗು ನೀಡಿದರು. ಪುಟಾಣಿ ಮಕ್ಕಳು ಕೂಡ ಕಳಶ ಹೊತ್ತು ಎಲ್ಲರ ಗಮನ ಸೆಳೆದರು.
ಗುರುವಂದನಾ ಕಾರ್ಯಕ್ರಮ : ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಯಾವದೇ ಜಾತಿ, ಧರ್ಮ ಭೇದವಿಲ್ಲದೆ, ಮಾನವ ಧರ್ಮದ ತಳಹದಿಯ ಮೇಲೆ ಮಠ ಬೆಳೆದು ನಿಂತಿದೆ ಎಂದು ಹೇಳಿದರು.
ಒಂದೇ ಸೂರಿನಡಿ ಎಲ್ಲ ಧರ್ಮದ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನ ವಿದ್ಯಾರ್ಥಿಗಳು ಇದ್ದಾರೆ. ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ ನಡೆಸುತ್ತ ಎಲ್ಲ ಮಕ್ಕಳಿಗೂ ಮಠದಲ್ಲಿ ಉಚಿತ ಶಿಕ್ಷಣ, ವಸತಿ, ಊಟ ನೀಡಲಾಗುತ್ತಿದೆ ಎಂದು ಹೇಳಿದರು.
12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣ ನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು ಯಾವದೇ ಒಂದು ಧರ್ಮಕ್ಕೆ ಸೀಮಿತವಾಗದಂತೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸ್ವಾಮೀಜಿಗಳು ಮುಂದಿನ ಪೀಳಿಗೆಯನ್ನು ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಪಣತೊಟ್ಟಿದ್ದಾರೆ ಎಂದರು.
ವೀರಶೈವ ಪುರುಷರ ಸಂಘದ ಅಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಜಗದೀಶ್, ಕಾರ್ಯದರ್ಶಿ ಟಿ.ವಿ.ಶಂಕರ್ ಮೂರ್ತಿ, ಯುವಕ ಸಂಘದ ಕಾರ್ಯದರ್ಶಿ ಮಂಜು ನಾಥ್, ಗೌರವ ಕಾರ್ಯದರ್ಶಿ ಯುವರಂಜನ್, ಸಹ ಕಾರ್ಯದರ್ಶಿ ಪ್ರಸನ್ನ ಮುಖಂಡರಾದ ಟಿ.ಕೆ.ಬಸವರಾಜು, ಪಾಲಾಕ್ಷ, ಟಿ.ಎಂ.ಚನ್ನಮಲ್ಲಿಕಾರ್ಜುನ, ಟಿ.ವೈ.ಸಂಗಮೇಶ್, ಟಿ.ವಿ. ಶಿವಮೂರ್ತಿ, ಟಿ.ಎಂ.ಶಿವಪ್ಪ, ಟಿ.ಎನ್.ಶಿವಾನಂದ, ಟಿ.ಟಿ.ತ್ರಿನೇಶ್ , ಟಿ.ಎಸ್.ಪ್ರಕಾಶ್ ಉಪಸ್ಥಿತರಿದ್ದರು. ದಾನಿಗಳಾದ ಶಂಕರಮೂರ್ತಿ ಅವರು ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ನೆರವೇರಿಸಿದರು.