ಮಡಿಕೇರಿ, ಏ 16: ಕಲಾವಿದನ ಕುಂಚದಿಂದ ಮೂಡಿ ಬರುವ ಕಲೆಯು ಸೌಂದರ್ಯ ಮತ್ತು ಆನಂದದಲ್ಲಿ ಒಂದಾಗಬೇಕು ಎಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಹೇಳಿದರು.ಭಾರತೀಯ ವಿದ್ಯಾಭವನ ಮತ್ತು ಕಲಾಭಾರತಿ ಸಹಯೋಗದಲ್ಲಿ ನಡೆದ ವಿಶ್ವ ಕಲಾದಿವಸ ಚಿತ್ರಪ್ರದರ್ಶನ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದನ ಆಂತರ್ಯದ ಚಿಂತನೆ ಮತ್ತು ಭಾವನೆ ಚಿತ್ರ ರೂಪದಲ್ಲಿ ಹೊರಹೊಮ್ಮುತ್ತದೆ. ಅದರ ಅಂತಿಮ ಉದ್ದೇಶ ಭಗವಂತನ ಗುಣಗಳಾದ ಸೌಂದರ್ಯ ಮತ್ತು ಆನಂದದಲ್ಲಿ ಒಂದಾಗುವದಾಗಬೇಕು ಎಂದರು. ಸತ್ಯಂ ಶಿವಂ ಸುಂದರಂ ಎಂಬ ಸಾಲನ್ನು ಉದಾಹರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಮಾತನಾಡಿ ಒತ್ತಡದಿಂದ ಹೊರಬರಲು ಕಲೆ ಉತ್ತಮ ಹವ್ಯಾಸ ಎಂದರು. ಕಲಾ ಚಟುವಟಿಕೆಗಳಿಗೆ ಭಾರತೀಯ ವಿದ್ಯಾಭವನ ಸದಾ ಸಹಕರಿಸುತ್ತದೆ ಎಂದರು.

ಕಲಾವಿದ ಪೂ.ರ. ನಾಗೇಶ್ ಮಾತನಾಡಿ, ದಸರಾ ಸಂದರ್ಭ ಚಿತ್ರದಸರಾ ಎಂಬ ಕಮ್ಮಟ ಏರ್ಪಡಿಸುವಂತಾಗಬೇಕು ಎಂದರು.

ಡಾ. ಪಾಟ್ಕರ್ ವೇದಿಕೆಯಲ್ಲಿದ್ದರು. ಅನುಶ್ರೀ ಸ್ವಾಗತ, ಕಲಾವಿದ - ಸಂಚಾಲಕ ಪ್ರಸನ್ನಕುಮಾರ್ ಸ್ವಾಗತ, ಗೌತಮ್ ವಂದನಾರ್ಪಣೆ ಮಾಡಿದರು.