ಗೋಣಿಕೊಪ್ಪ / ವೀರಾಜಪೇಟೆ, ಏ. 17 : ರಾಜ್ಯದಲ್ಲಿ ಮುಂದಿನ 28 ದಿನದಲ್ಲಿ ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರಕ್ಕೆ ಬರಲಿದ್ದು ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಜಿಲ್ಲೆಯ ರೈತರ,ಬೆಳೆಗಾರರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವದಾಗಿ ಜೆಡಿಎಸ್ ರಾಜ್ಯಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಪಕ್ಷದ ಬಹಿರಂಗ ಸಭೆಯಲ್ಲಿ ಹೂ ಗಿಡಕ್ಕೆ ನೀರನ್ನು ಹಾಕುವ ಮೂಲಕ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ, ಜಿಲ್ಲೆಯ ರೈತರ ಬೆಳೆಗಾರರ ಸಂಕಷ್ಟವನ್ನು ನಾನು ಅರಿತಿದ್ದೇನೆ. ಇದಕ್ಕೆ ಪರಿಹಾರವಾಗಿ ಸಂಪೂರ್ಣ ಕೃಷಿ ಸಾಲ ಮನ್ನಾ ಒಂದೇ ದಾರಿ ಎಂದರು.ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಇಲ್ಲಿಯ ತನಕ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ಕಳುಹಿಸಿರುವಿರಿ ಇವರಿಂದ ಜಿಲ್ಲೆಯ ಜನತೆಯ ಸಮಸ್ಯೆ ಪರಿಹಾರ ಕಂಡಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಬೇರೆ ರಾಜ್ಯದಲ್ಲಿ ರೈತರು ಬೆಳೆದ ಭತ್ತದ ಬೆಳೆಗಳಿಗೆ ನೀರು ಇಲ್ಲದೆ ರೈತ ತನ್ನ ಟ್ರಾಕ್ಟರ್‍ನಿಂದ ನೀರನ್ನು ಹಾಯಿಸುವ ಪರಿಸ್ಥಿತಿ ಬಂದೊದಗಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ಸಾಲ ಮನ್ನಾದ ಬಗ್ಗೆ ಘೋಷಣೆ ಮಾಡಿ ತಿಂಗಳು ಕಳೆದರೂ ಇದು ಇನ್ನು ಮನ್ನಾ ಆಗಿಲ್ಲ ಎಂದು ಆರೋಪಿಸಿದರು. ಹಿಂದೂ, ಮುಸ್ಲಿಂಮರು ಸಾಮರಸ್ಯದಿಂದ ಬದುಕಲು ಎರಡು ರಾಷ್ಟ್ರೀಯ ಪಕ್ಷಗಳು ಅವಕಾಶ ಕಲ್ಪಿಸುತ್ತಿಲ್ಲ. ಕೋಮು ಭಾವನೆಯಿಂದ ಕೆರಳಿಸಿ ಆತಂಕ ಸೃಷ್ಟಿಸಿದ್ದಾರೆ. ಮುಂದಿನ ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ನೀಡುವದಿಲ್ಲ. ಟಿಪ್ಪು ಜಯಂತಿ ವಿಚಾರದಲ್ಲಿ 144 ಸೆಕ್ಷನ್ ಜಾರಿಗೆ ತರುವ ಮೂಲಕ ಜಯಂತಿ ಆಚರಣೆ ನಡೆಸಿರುವದು ಎಷ್ಟು ಸರಿ.?ಕೋಮು ಸಂಘರ್ಷ ಮಾಡಲು ಇವರಿಗೆ ಕಾರಣ ಬೇಕಷ್ಟೆ ಎಂದು ಕಾಂಗ್ರೆಸ್ ವಿರುದ್ದ ಹರಿ ಹಾಯ್ದರು.ಧರ್ಮದ ಬಗ್ಗೆ ಚರ್ಚಿಸಲು ಗುರುಗಳು ಇದ್ದಾರೆ. ಆ ಬಗ್ಗೆ ಅವರು ನಿರ್ಧಾರ ಮಾಡುತ್ತಾರೆ. ಇದರಲ್ಲಿ ರಾಜಕಾರಣಿಗಳ ಮೂಗು ತೂರಿಸುವದು ಸರಿಯಲ್ಲ ಎಂದರು.
ನಾವು ಅಧಿಕಾರಕ್ಕೆ ಬಂದಲ್ಲಿ ವಿಧಾನಸೌಧಕ್ಕೆ ಈ ನಾಡಿನ ಜನತೆ ಯನ್ನು ರೈತರನ್ನು,ಕಾಫಿ ಬೆಳೆಗಾರರನ್ನು ಬರಮಾಡಿಸಿಕೊಂಡು ರೈತರ ಸಮಸ್ಯೆ ಗಳಿಗೆ ಪರಿಹಾರವನ್ನು ತಿಳಿದುಕೊಂಡು ಆ ಮೂಲಕ ಆಡಳಿತ ನಡೆಸುತ್ತೇನೆ. ನನಗೊಂದು ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು. ಯುವಕರನ್ನು ಹಾದಿ ತಪ್ಪಿಸುವವರು ಹೆಚ್ಚಾಗಿದ್ದಾರೆ. ಯುವಕರು ಮುಂದೆ ಇವರಿಂದ ಎಚ್ಚರ ವಹಿಸಬೇಕು. 1951ರಲ್ಲಿ 60 ಕೋಟಿ ಸರ್ಕಾರಕ್ಕೆ ಆದಾಯ ನೀಡುತ್ತಿದ್ದ ಜನತೆ ಇಂದು ಎರಡು ಲಕ್ಷ ಕೋಟಿ ಆದಾಯ ನೀಡುತ್ತಿದ್ದಾರೆ. ಈ ಹಣವು ವಿವಿಧ ಯೋಜನೆ ಹೆಸರಿನಲ್ಲಿ ಹಾಳಾಗುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿನ ಪ್ರವಾಸದ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ರೈತರ ಸಾಲ ಮನ್ನಾದಂತೆ ಮಹಿಳೆಯರ ಸ್ವಸಹಾಯ ಸಂಘದ ಸಾಲವನ್ನು ಮನ್ನಾ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಇವರ 4,300 ಸಾವಿರ ಕೋಟಿ ಸಾಲವನ್ನು ಅಧಿಕಾರಕ್ಕೆ ಬಂದ ನಂತರ ಮನ್ನಾ ಮಾಡುತ್ತೇನೆ. ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುತ್ತೇನೆ. 20 ಕೋಟಿ ಸಸಿ ನೆಡುವ ಯೋಜನೆ ಜಾರಿಗೆ ತರುವ ಮೂಲಕ ಅವಿದ್ಯಾವಂತ ಮಕ್ಕಳಿಗೆ ತಿಂಗಳಿಗೆ 5 ಸಾವಿರ ವೇತನ ನೀಡುತ್ತೇನೆ. ಕೈಗಾರಿಕೆಗೆ ಒತ್ತು ನೀಡುತ್ತೇನೆ. (ಮೊದಲ ಪುಟದಿಂದ) ತಾಲೂಕು ಕೇಂದ್ರಕ್ಕೆ ಹೈಟೆಕ್ ಆಸ್ಪತ್ರೆ ನಿರ್ಮಾಣ ಹಾಗೂ ಉನ್ನತ ಶಿಕ್ಷಣಕ್ಕಾಗಿ ಈ ಭಾಗದಲ್ಲಿ ಕಾಲೇಜು ನಿರ್ಮಾಣ,ನಿರುದ್ಯೋಗ ಯುವಕ,ಯುವತಿಯರಿಗೆ ಪ್ರತಿ ತಿಂಗಳು 2 ಸಾವಿರ ಗೌರವಧನ ನೀಡುವ ಮೂಲಕ ಉಚಿತ ತರಬೇತಿ ನೀಡುತ್ತೇನೆ. ನನಗೆ ವೈಯುಕ್ತಿಕ ಆಸೆಗಳಿಲ್ಲ ಆರೋಗ್ಯ ವ್ಯತ್ಯಾಸವಿದ್ದರೂ ರಾಜ್ಯದಲ್ಲಿ ಬದಲಾವಣೆ ತರಲೇಬೇಕೆಂಬ ದೃಢ ನಿರ್ಧಾರದಿಂದ ಆರೋಗ್ಯವನ್ನು ಲೆಕ್ಕಿಸದೆ ಪ್ರವಾಸ ಮಾಡುವದರ ಮೂಲಕ ಜನತೆಯನ್ನು ತಲುಪಿದ್ದೇನೆ. ಮುಂದಿನ 28 ದಿನಗಳಲ್ಲಿ ಸಂಪೂರ್ಣ ಬಹುಮತ 113ರ ಸಂಖ್ಯೆಯಲ್ಲಿ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಕೂಡ ಇರಬೇಕು. ಸಮಾಜ ಸೇವೆ ಸಲ್ಲಿಸುತ್ತಿರುವ ಇವರಿಗೆ ಜನತೆ ಈ ಬಾರಿ ಆಶೀರ್ವಾದ ಮಾಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಬಹಿರಂಗ ಸಭೆಯಲ್ಲಿ ಪ್ರಾಸ್ತವಿಕವಾಗಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ಮಾತನಾಡಿ ಕ್ಷೇತ್ರದಲ್ಲಿ ಮತದಾರರ ಭಾವನೆಗಳು ಈ ಬಾರಿ ಮತವಾಗಿ ಪರಿವರ್ತನೆ ಆಗಲಿದೆ ಕ್ಷೇತ್ರದಲ್ಲಿ ಜಾತ್ಯತೀತ ಮತದಾರನಿದ್ದು ಈ ಬಾರಿ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ನೀಡಲಿದ್ದಾನೆ. ಈ ಹಿಂದೆ ಜೆಡಿಎಸ್‍ನಿಂದ ಅಧಿಕಾರಕ್ಕೆ ಪಡೆದು ಮಂತ್ರಿಯಾದವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜೆಡಿಎಸ್ ತಾರ್ಕಿಕ ಅಂತ್ಯದವರೆಗೂ ಹೋರಾಟ ನಡೆಸಿದೆ ಆನೆ ಮಾನವ ಸಂಘರ್ಷದಲ್ಲಿ ಅರಣ್ಯ ಮಂತ್ರಿಗಳು ಸ್ಪಂಧಿಸಲಿಲ್ಲ. ಅಂಗವೈಫಲ್ಯದಿಂದ ನರಳುತ್ತಿರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದ ಸಂಕೇತ್ ಪೂವಯ್ಯ ಮುಂದಿನ ಉತ್ತಮ ಸರ್ಕಾರಕ್ಕಾಗಿ ಜೆಡಿಎಸ್‍ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ರೋಡ್ ಶೋ : ಮಧ್ಯಾಹ್ನ 12 ಗಂಟೆಗೆ ವೀರಾಜಪೇಟೆಯ ಗಡಿಯಾರ ಕಂಬದಿಂದ ಕುಮಾರ ಪರ್ವ ವಾಹನದಲ್ಲಿ ರೋಡ್ ಶೋ ಆರಂಭಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಸಂಕೇತ್ ಪೂವಯ್ಯ ಬಸ್ ನಿಲ್ದಾಣ ದೊಡ್ಡಟ್ಟಿ ಚೌಕ್ ಮಾರ್ಗವಾಗಿ ತಾಲೂಕು ಮೈದಾನವನ್ನು ತಲುಪಿದರು. ಮೆರವಣಿಗೆಯಲ್ಲಿ ಕೇರಳದ ಮಹಿಳೆಯರಿಂದ ಚಂಡೆ ವಾದ್ಯ ಹಾಗೂ ಮೈಸೂರಿನ ಬ್ಯಾಂಡ್ ನೊಂದಿಗೆ ಸಾವಿರಾರು ಕಾರ್ಯಕರ್ತರು,ಮುಖಂಡರು ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಇತ್ತೀಚೆಗೆ ಬೀರುಗದಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರನ್ನು ಕುಮಾರಸ್ವಾಮಿ ಮಾತನಾಡಿಸಿದರು. ಅಭಿವೃದ್ಧಿಯ ಸಂಕೇತ ಎಂಬ ಪುಸ್ತಕವನ್ನು ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ರೈತ ಗೀತೆ ಹಾಡಲಾಯಿತು. ಕ್ಷೇತ್ರ ಅಧ್ಯಕ್ಷ ಎಸ್.ಎಚ್. ಮತೀನ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಮನೆಯಪಂಡ ಬೆಳ್ಯಪ್ಪ, ಯುವ ಜೆಡಿಎಸ್‍ನ ಅಮ್ಮಂಡ ವಿವೇಕ್, ವೀರಾಜಪೇಟೆ ನಗರ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಆಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಮರಮಾಲೆ ಗಣೇಶ್, ವಕೀಲರಾದ ಮೇರಿಯಂಡ ಪೂವಯ್ಯ, ಎಂ.ಟಿ. ಕಾರ್ಯಪ್ಪ, ಪಾಣತ್ತಲೆ ವಿಶ್ವನಾಥ್, ಮನ್ಸೂರ್ ಅಲಿ, ಮನೋಜ್ ಬೋಪಯ್ಯ, ಜಿಲ್ಲಾ ಕಾರ್ಯದರ್ಶಿ ಜಂಶೀರ್, ಅಯೂಬ್, ಆದಿಲ್, ಸಲಾಂ, ಅಸೀಮ್, ಬಿಎಸ್‍ಪಿಯ ಮುಖಂಡರು ಸೇರಿದಂತೆ ಮುಂತಾದವರು ಹಾಜರಿದ್ದರು.
ಪೊನ್ನಂಪೇಟೆ ತಾಲೂಕು ಬೇಡಿಕೆಗೆ ಸ್ಪಂದನೆ :ಸಭೆಯ ಸಂದರ್ಭ ಕೆಲವು ನಾಗರಿಕರು ಪೊನ್ನಂಪೇಟೆಯನ್ನು ನೂತನ ತಾಲೂಕಾಗಿ ಘೋಷಿಸುವ ಕುರಿತು ಸಲ್ಲಿಸಿದ ಮನವಿಗೆ ಸ್ಪಂದಿಸಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನೂತನ ತಾಲೂಕು ರಚಿಸುವ ಕುರಿತು ಭರವಸೆಯಿತ್ತರು. ಇದಲ್ಲದೆ ಕೂಡ್ಲೂರುವಿನ ಏತ ನೀರಾವರಿ ಯೋಜನೆಗೂ ಸ್ಪಂದಿಸುವದಾಗಿ ಅವರು ಹೇಳಿದರು.