ಮಡಿಕೇರಿ, ಏ. 17: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರತ್ಯೇಕ ದಿನಗಳಲ್ಲಿ ಬೇಸಿಗೆ ರಜೆಯನ್ನು ಘೋಷಿಸಲಾಗಿದ್ದು, ಇಬ್ಬರಿಗೂ ಒಂದೇ ಅವಧಿಯಲ್ಲಿ ರಜೆ ನೀಡಬೇಕೆಂದು ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಒತ್ತಾಯಿಸಿದೆ. ಮೇ 2 ರಿಂದ 16 ರವರೆಗೆ ಸಹಾಯಕಿಯರಿಗೆ ಹಾಗೂ ಮೇ 17 ರಿಂದ 31 ರವರೆಗೆ ಕಾರ್ಯಕರ್ತೆಯರಿಗೆ ತಲಾ 15 ದಿನಗಳಂತೆ ರಜೆಯನ್ನು ಘೋಷಿಸಲಾಗಿದೆ. ಆದರೆ ಮೇ 2 ರಿಂದ 16 ರ ಅವಧಿಯಲ್ಲಿ ಕೆಲವು ಕಾರ್ಯಕರ್ತೆಯರಿಗೆ ಚುನಾವಣಾ ಕರ್ತವ್ಯವೂ ಇದೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಒಬ್ಬೊಬ್ಬರಾಗಿ ಕಾರ್ಯ ನಿರ್ವಹಿಸಲು ಕಷ್ಟವಾಗಲಿದೆ. ಆದ್ದರಿಂದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮೇ 16 ರಿಂದ 31 ರವರೆಗೆ ಏಕಕಾಲದಲ್ಲಿ ರಜೆಯನ್ನು ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಮಾಡಿಕೊಂಡಿರುವದಾಗಿ ಸಂಘದ ಅಧ್ಯಕ್ಷೆ ವಿ.ಹೆಚ್. ನಾಗರತ್ನ ತಿಳಿಸಿದ್ದಾರೆ.