ಕುಶಾಲನಗರ, ಏ 17: ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ವಿಜೇತರಾಗಿಸುವ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಶಯ ವ್ಯಕ್ತಪಡಿಸಿದರು. ಅವರು ಕುಶಾಲನಗರದಲ್ಲಿ ನಡೆದ ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಖಚಿತವಾಗಿದ್ದು ತಮ್ಮ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದರಲ್ಲದೆ ರೈತರ ಸಲಹೆ, ಸೂಚನೆ ಮಾಹಿತಿ ಮೇರೆಗೆ ಸರಕಾರ ಆಡಳಿತ ನಡೆಸಲಿದ್ದು ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದರು.ಕಾಫಿ ಬೆಳೆಗಾರರು ಕೊಡಗು ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದು ರೈತರ ಬಾಳಿನಲ್ಲಿ ಚೈತನ್ಯ ರೂಪಿಸುವುದು, ರೈತ ಸಮುದಾಯದ ಬೆಳೆಗೆ ಬೆಂಬಲ ಬೆಲೆ ನೀಡುವುದು ಈ ಮೂಲಕ ರಾಜ್ಯದಲ್ಲಿ ಕೃಷಿ ನೀತಿ ಬದಲಾವಣೆ ತರಲು ಉದ್ದೇಶ ಹೊಂದಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಸರಕಾರ ಭಾಗ್ಯಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಹಣದ ಮತ್ತು ಅಧಿಕಾರದ ಮದದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ ಹಾದಿಯನ್ನು ಮರೆತಿದ್ದಾರೆ ಎಂದು ದೂರಿದರು. ಪಕ್ಷದ ಒತ್ತಾಯದ ಮೇಲೆ ಮಡಿಕೇರಿ ಕ್ಷೇತ್ರದಲ್ಲಿ ಬಿ.ಎ.ಜೀವಿಜಯ ಅಭ್ಯರ್ಥಿಯಾಗಿದ್ದು ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ವಿರಾಜಪೇಟೆ ಕ್ಷೇತ್ರದಿಂದ ಅಭ್ಯರ್ಥಿಗಳಾಗಿದ್ದಾರೆ. ಇವರ ಗೆಲುವಿಗೆ ಕಾರಣರಾಗುವದರೊಂದಿಗೆ ರಾಜ್ಯದ ಭವಿಷ್ಯ

(ಮೊದಲ ಪುಟದಿಂದ) ನಿರ್ಮಾಣ ಮಾಡುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಅಭ್ಯರ್ಥಿಗಳಾದ ಬಿ.ಎ.ಜೀವಿಜಯ, ಸಂಕೇತ್‍ಪೂವಯ್ಯ, ಪಿರಿಯಾಪಟ್ಟಣ ಕ್ಷೇತ್ರದ ಅಭ್ಯರ್ಥಿ ಕೆ.ಮಹದೇವ್, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಪ್ರೇಮ್‍ಕುಮಾರ್ ಉಪಸ್ಥಿತರಿದ್ದರು.

ಕುಮಾರಪರ್ವ ಅಂಗವಾಗಿ ಸಾವಿರಾರು ಕಾರ್ಯಕರ್ತರು ಕೊಪ್ಪ ಗೇಟ್ ಬಳಿಯಿಂದ ತಾವರೆಕೆರೆ ಬಳಿಯ ಸಭಾಂಗಣ ತನಕ ಮೆರವಣಿಗೆ ತೆರಳಿದರು.

ಇದೇ ಸಂದರ್ಭ ನೂರಾರು ಕಾರ್ಯಕರ್ತರು ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.ಜೆಡಿಎಸ್ ಅಭ್ಯರ್ಥಿಗಳ ಗೆಲುವಿನೊಂದಿಗೆ ಸಮಸ್ಯೆಗೆ ಪರಿಹಾರ.