ಒಡೆಯನಪುರ, ಏ. 17: ಪಟ್ಟಣ ಮತ್ತು ನಗರ ನಿವಾಸಿಗಳಿಗೆ ಗ್ರಾಮ, ವ್ಯವಸಾಯ ಹಾಗೂ ರೈತಾಪಿ ಜೀವನದ ಬಗ್ಗೆ ಅರಿವು ಹೊಂದಿರುವದಿಲ್ಲ. ಆಹಾರ ಪದಾರ್ಥಗಳು ಸೇರಿದಂತೆ ತರಕಾರಿ ಕಾಯಿಪಲ್ಲೆಗಳು ಹಳ್ಳಿಗಳಲ್ಲಿ ರೈತರು ಬೆಳೆದು ಪಟ್ಟಣ ಮತ್ತು ನಗರಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೆ ಪಟ್ಟಣ ಮತ್ತು ನಗರಗಳು ಎಲ್ಲೆಡೆ ಕಾಂಕ್ರೀಟ್ ಜಾಗವಾಗಿ ಪರಿವರ್ತನೆಯಾಗುತ್ತಿದ್ದು, ಮನೆಯ ಆಚೀಚೆ ಒಂದಿಂಚು ಮಣ್ಣಿನ ಜಾಗ ಇಲ್ಲದೆ ಹೂವಿನ ಗಿಡಗಳನ್ನು ಬೆಳೆಸಲೂ ಸಹ ಜಾಗ ಇಲ್ಲದಂತಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಶನಿವಾರಸಂತೆ ಪಟ್ಟಣದ ಶಿಕ್ಷಕರೊಬ್ಬರು ತನ್ನ ಮನೆಯ ಟೆರೇಸ್ ಮೇಲೆ ಬಗೆಬಗೆಯ ತರಕಾರಿಗಳನ್ನು ಬೆಳೆಸುವ ಮೂಲಕ ಪಟ್ಟಣ ನಿವಾಸಿಗಳಿಗೆ ಮಾತ್ರ ಅಲ್ಲದೆ ಅಕ್ಕಪಕ್ಕದ ಗ್ರಾಮಗಳ ರೈತಾಪಿ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.

ಶನಿವಾರಸಂತೆ ಪಟ್ಟಣದ ತ್ಯಾಗರಾಜ ಕಾಲೋನಿ ನಿವಾಸಿ ಗೋಪಾಲಪುರ ಜಿ.ಪಂ. ಕ್ಷೇತ್ರದ ಹಾಲಿ ಸದಸ್ಯೆ ಸರೋಜಮ್ಮ ಅವರ ಪುತ್ರ ಕೆ.ಪಿ. ಜಯಕುಮಾರ್ ತಮ್ಮ ಮನೆಯ ಮೇಲಿನ ಟೆರೇಸ್‍ನಲ್ಲಿ ತರಕಾರಿಗಳನ್ನು ಬೆಳೆದ ಶಾಲಾ ಶಿಕ್ಷಕ. ಕೆ.ಪಿ. ಜಯಕುಮಾರ್ ಎಂಎ ಪದವೀಧರರಾಗಿದ್ದು, ಸ್ಥಳೀಯ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಉತ್ತಮ ಭಾಷಣಗಾರ ಮತ್ತು ನಿರೂಪಕರಾಗಿಯೂ ಜನಪ್ರಿಯತೆಗಳಿಸಿರುವ ಕೆ.ಪಿ. ಜಯಕುಮಾರ್ ಕಳೆದ 3 ತಿಂಗಳ ಹಿಂದೆ ಮನೆಯ ಮೇಲಿನ ಟೆರೇಸ್ ಮೇಲೆ ವಿವಿಧ ತರಕಾರಿಗಳನ್ನು ಬೆಳೆದು ತಮ್ಮ ಮನೆಗೆ ಸಾಕಾಗುವಷ್ಟು ಉಪಯೋಗಿಸಿ ಅಕ್ಕಪಕ್ಕದ ಮನೆಗಳಿಗೆ ತರಕಾರಿಯನ್ನು ಉಚಿತವಾಗಿ ಕೊಡುತ್ತಾರೆ.

40 ಅಡಿ ಅಗಲ 60 ಅಡಿ ಉದ್ದ ವಿಸ್ತಾರವನ್ನು ಹೊಂದಿರುವ ಟೆರೇಸ್ ಜಾಗದಲ್ಲಿ ತಗಡಿನ ಬುಟ್ಟಿಗಳನ್ನು ರಚಿಸಿಕೊಂಡು ಅವುಗಳ ಮೂಲಕ ಬಗೆಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೆಳೆದ ತರಕಾರಿಗಳಲ್ಲಿ ಟೊಮೆಟೋ, ಹಸಿರು ಮೆಣಸು, ಬದನೆಕಾಯಿ, ಬೆಂಡೆಕಾಯಿ, ಬೀನ್ಸ್, ತೊಗರಿ, ಸಿಹಿ ಕುಂಬಳ, ಹಾಗಲಕಾಯಿ, ಹೀರೆಕಾಯಿ, ಸೀಮೆ ಬದನೆ, ಆಲೂಗಡ್ಡೆ ಮುಂತಾದ ಕಾಯಿಪಲ್ಲೆಗಳು ಸೇರಿದಂತೆ ಬಸಳೆ, ತೊಂಡೆಕಾಯಿ ಮುಂತಾದ ಚಪ್ಪರದಲ್ಲಿ ಬೆಳೆಯುವ ತರಕಾರಿಗಳನ್ನು ಸಹ ಬೆಳೆದಿದ್ದಾರೆ. ಇದರ ಜತೆಯಲ್ಲಿ ಸೊಪ್ಪು, ಪುದಿನ, ಅಲೋವೆರ ಮುಂತಾದ ಔಷಧಿಯ ಗುಣವನ್ನು ಹೊಂದಿರುವ ಸಸ್ಯಗಳನ್ನು ಬೆಳೆದಿದ್ದಾರೆ. ವಿಶೇóಷ ಎಂದರೆ ಇವರು ಸಾವಯವ ಪದ್ಧತಿ ಮೂಲಕ ತರಕಾರಿಗಳನ್ನು ಬೆಳೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ತರಕಾರಿಗೆ ರಾಸಾಯನಿಕ ಗೊಬ್ಬರ ಹಾಕದೆ ತರಕಾರಿಯನ್ನು ಬೆಳೆಯುತ್ತಿದ್ದು, ಮನೆಯಲ್ಲಿ ಬಟ್ಟೆ ತೊಳೆಯಲು ಉಪಯೋಗಿಸುವ ನೀರು, ಕುಡಿಯುವ ನೀರಿಗಾಗಿ ಟೆರೇಸ್ ಮೇಲೆ ಅಳವಡಿಸಿರುವ ಸಿಂಟೆಕ್ಸ್‍ನಲ್ಲಿ ಹೆಚ್ಚಾದ ನೀರನ್ನು ತರಕಾರಿ ಬೆಳೆಗಳಿಗೆ ಹಾಯಿಸುತ್ತಾರೆ. ಅಡುಗೆಗೆ ಉಪಯೋಗಿಸಿ ನಿರುಪಯುಕ್ತವಾದ ತರಕಾರಿ ಸಿಪ್ಪೆ ಮತ್ತು ಕೊಳೆತ ಸೊಪ್ಪು ಸೇರಿದಂತೆ ಅಕ್ಕಪಕ್ಕದ ಮನೆಯಿಂದ ಸಂಗ್ರಹಿಸಿದ ಹಸಿ ತ್ಯಾಜ್ಯಗಳನ್ನು ತಂದು ಅದನ್ನು ಮಣ್ಣಿನೊಂದಿಗೆ ಬೆರೆಸಿ ಒಂದೆರೆಡು ದಿನ ಒಣಗಲು ಬಿಡುತ್ತಾರೆ, ಇದು ಸಾವಯವ ಗೊಬ್ಬರವಾಗಿ ಪರಿವರ್ತನೆಯಾದ ನಂತರ ತರಕಾರಿ ಗಿಡಗಳಿಗೆ ಗೊಬ್ಬರವಾಗಿ ಹಾಕುತ್ತಾರೆ. ಇದರಿಂದ ತರಕಾರಿ ಬೆಳೆಗಳು ಹುಲುಸಾಗಿ ಬೆಳೆದಿದೆ. ಪ್ರತಿದಿನ ಬೆಳೆದ ತರಕಾರಿಗಳನ್ನು ಉಪಯೋಗಿಸುವದ ಜೊತೆಯಲ್ಲಿ ಅಕ್ಕಪಕ್ಕದ ಮನೆಗಳಿಗೂ ಉಚಿತವಾಗಿ ವಿತರಿಸುತ್ತಿದ್ದಾರೆ. ಪರಿಚಯ ಇರುವ ವ್ಯಕ್ತಿಯೊಬ್ಬರು ಸಾವಯವ ಕೃಷಿಯನ್ನು ಮಾಡಿದ್ದಾರೆ ಅವರು ತನಗೆ ಸ್ಫೂರ್ತಿಯಾದರು. ಜೊತೆಯಲ್ಲಿ ತಾನು ಕೆಲವು ತಿಂಗಳ ಹಿಂದೆ ಬೇರೆ ಊರಿನಲ್ಲಿ ಸಾವಯವ ಕೃಷಿ ಬಗ್ಗೆ ಉಪನ್ಯಾಸ ನೀಡಿದ್ದೆ. ಆದರೆ ಕೇವಲ ಉಪನ್ಯಾಸ ನೀಡಿದ ಮಾತ್ರಕ್ಕೆ ಅದನ್ನು ಯಾರು ಸಹ ಪಾಲನೆ ಮಾಡುವದಿಲ್ಲ ಎಂಬದನ್ನು ಅರಿತುಕೊಂಡು, ಮನೆ ಬಿಟ್ಟರೆ ಬೇರೆ ಒಂದಿಂಚೂ ಸಹ ಜಾಗ ಇಲ್ಲದ ಕಾರಣದಿಂದ ಮನೆಯ ಟೆರೇಸ್ ಮೇಲೆಯೇ ಪ್ರಾಯೋಗಿಕವಾಗಿ ಸಾವಯವ ಕ್ರಮದಿಂದ ತರಕಾರಿ ಬೆಳೆದಿರುತ್ತೇನೆ. ಬೆಳೆದಿರುವ ಎಲ್ಲಾ ತರಕಾರಿಗಳು ಫಲವತ್ತಾಗಿದೆ, ಬಿಡುವಿನ ಸಮಯದಲ್ಲಿ ತರಕಾರಿ ಬೆಳೆಯನ್ನು ನಿರ್ವಹಣೆ ಮಾಡುತ್ತೇನೆ ಹಾಗೂ ಮುಂದಿನ ದಿನದಲ್ಲಿ ಟೆರೇಸ್ ಮೇಲೆ ವರ್ಷ ಪೂರ್ತಿಯಾಗಿ ತರಕಾರಿಯನ್ನು ಬೆಳೆಯುವದಾಗಿ ಜಯಕುಮರ್ ಹೇಳುತ್ತಾರೆ. - ವಿ.ಸಿ. ಸುರೇಶ್ ಒಡೆಯನಪುರ