ಸೋಮವಾರಪೇಟೆ, ಏ. 17: ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿಧನರಾದ ಮಾಜಿ ಸೈನಿಕರ ಕುಟುಂಬ ಸದಸ್ಯರನ್ನು ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಸೈನಿಕರ ಸೇವೆಯನ್ನು ಸ್ಮರಿಸಲಾಯಿತು.
ಸೋಮವಾರಪೇಟೆಯ ತಿಮ್ಮಯ್ಯ ಮತ್ತು ಸೋಮಣ್ಣ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಕುಟುಂಬ ಸದಸ್ಯರಾದ ಚೋಂದಮ್ಮ ತಿಮ್ಮಯ್ಯ, ಬೇಬಿ ಸೋಮಣ್ಣ ಅವರುಗಳನ್ನು ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಪತ್ನಿ ನಿಶಾ ಸುನಿಲ್, ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ವಿಕ್ರಂಕಾಂತ್, ರೋಷನ್ ಮಿನ್ಜ್, ವಿಕಾಶ್ ಶರ್ಮ, ನಿತಿನ್ ಕುಮಾರ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಕ್ಲಬ್ ಅಧ್ಯಕ್ಷ ಹೆಚ್.ಎನ್. ಅಶೋಕ್ ಸೇರಿದಂತೆ ಕ್ಲಬ್ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಆಟಗಾರರಿಗೆ ವಿಶೇಷ ಬಹುಮಾನ: ಡಾಲ್ಪೀನ್ಸ್ ಕ್ಲಬ್ನಿಂದ ಆಯೋಜಿಸಿದ್ದ 4ನೇ ವರ್ಷದ ದಿ. ವಿಠಲಾಚಾರ್ಯ ಸ್ಮಾರಕ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಆತಿಥೇಯ ಡಾಲ್ಪೀನ್ಸ್ ಹಾಗೂ ದ್ವಿತೀಯ ಟ್ರೋಫಿ ಪಡೆದ ಕೂಡಿಗೆ ತಂಡಗಳಿಗೆ, ರಾಜ್ಯ ಶೌರ್ಯ ಪ್ರಶಸ್ತಿ ವಿಜೇತೆ, ಕಿಬ್ಬೆಟ್ಟ ಗ್ರಾಮದ ಕೆ.ಎಂ. ಶಾಂತಿ ಮುದ್ದ ಅವರು ವಿಶೇಷ ಬಹುಮಾನ ಪ್ರಾಯೋಜಿಸಿದ್ದು, ಮುದ್ದ ಅವರು ಆಟಗಾರರಿಗೆ ಬಹುಮಾನ ವಿತರಿಸಿದರು.