ಶನಿವಾರಸಂತೆ, ಏ. 17: ವಿಶಿಷ್ಟ ಕಲಿಕಾ ಪರಿಸರದಿಂದ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಈಗ ಮತ್ತೊಂದು ಗರಿ ಮೂಡಿದೆ. ಅದುವೇ ಸೋಲಾರ್ ಪಾರ್ಕ್!

ಇದೀಗ ಈ ಶಾಲೆಯಲ್ಲಿ ಬೇಸಿಗೆ ಶಿಬಿರ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಸೋಲಾರ್ ಪಾರ್ಕ್ ನಿರ್ಮಿಸಿದ್ದಾರೆ. ಶಿಕ್ಷಕ ಸಿ.ಎಸ್. ಸತೀಶ್ ಮಾರ್ಗ ದರ್ಶನದಲ್ಲಿ ವಿದ್ಯಾರ್ಥಿಗಳು ಶಾಲೆಯನ್ನು ಸೋಲಾರ್ ಪಾರ್ಕ್ ಆಗಿ ಪರಿವರ್ತಿಸಿದ್ದಾರೆ. ಈ ಪಾರ್ಕ್ ಭವಿಷ್ಯದಲ್ಲಿ ಉದ್ಭವಿಸಬಹುದಾದ ಇಂಧನ ಸಮಸ್ಯೆಗಳಿಗೆ ಪರ್ಯಾಯ ಅರಿವು ಮೂಡಿಸಲು ನೆರವಾಗುತ್ತಿದೆ.

ಏನಿದು ಸೋಲಾರ್ ಪಾರ್ಕ್?

ಹಲವಾರು ಸೋಲಾರ್ ಪ್ಯಾನಲ್ (ಸೌರಕೋಶ)ಗಳನ್ನು ಬಳಸಿ ಸೂರ್ಯನ ಕಿರಣಗಳು ಬೀಳುವ ಸ್ಥಳದಲ್ಲಿ ಇರಿಸಲಾಗಿದೆ. ಅವುಗಳಿಂದ ಸಂಗ್ರಹಿಸಿದ ವಾಹನಗಳ ಹಳೆಯ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತಿದೆ. ಈ ಬ್ಯಾಟರಿಗಳನ್ನು ಮತ್ತು ಹಳೆಯ ಯುಪಿಎಸ್‍ನ ಭಾಗಗಳನ್ನು ಬಳಸಿ ಶಾಲೆಯ ಕಂಪ್ಯೂಟರ್‍ಗಳು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಪ್ರಸ್ತುತ ಶಾಲೆಯಲ್ಲಿ ಕಂಪ್ಯೂಟರ್‍ಗಳು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುತ್ತಿವೆ. ಜತೆಗೆ 3 ವಿದ್ಯುತ್ ದೀಪಗಳೂ ಸೌರ ವಿದ್ಯುತ್ ನಿಂದಲೇ ಬೆಳಕು ನೀಡುತ್ತಿವೆ.