ಸೋಮವಾರಪೇಟೆ, ಏ. 17: ಚುನಾವಣೆಯಲ್ಲಿ ಬಳಸಲಾಗುವ ಇವಿಎಂ ಯಂತ್ರಗಳ ಮತದಾನ ಖಾತರಿ ಬಗ್ಗೆ ಅಧಿಕಾರಿಗಳು, ಮತದಾರರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಿದರು.
ಸಮೀಪದ ಹಾನಗಲ್ಲು ಬಾಣೆ ಅಂಗನವಾಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸೆಕ್ಟರ್ ಆಫೀಸರ್ ಲಕ್ಷ್ಮೀಕಾಂತ್ ಮತ್ತು ನಾಚಪ್ಪ ಅವರುಗಳು ಮತದಾರರಿಗೆ ಮಾಹಿತಿ ನೀಡಿದರು.
ತಾವು ಚಲಾಯಿಸಿದ ಮತದಾನ ಸರಿಯಾದ ಅಭ್ಯರ್ಥಿಗೆ ನಮೂದಾಗಿಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಲು ಇದೇ ಮೊದಲ ಬಾರಿಗೆ ವಿ.ವಿ. ಪ್ಯಾಟ್ ಬಳಸಲಾಗುತ್ತಿದ್ದು, ಮತದಾನದ ನಿಖರತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭ ಹಾನಗಲ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವೀಶ್, ಅರಣ್ಯ ಇಲಾಖೆಯ ಡಿಆರ್ಎಫ್ಓ ಮಹದೇವ್ ನಾಯಕ್, ಚಂದ್ರನ್, ಅಂಗನವಾಡಿ ಕಾರ್ಯಕರ್ತೆ ವನಜ, ಗ್ರಾಮಸ್ಥರಾದ ಸಂದ್ಯಾ ಕೃಷ್ಣಪ್ಪ, ಲೀಲಾ, ರೇಖಾ, ನಾಗರಾಜ್ ಅವರುಗಳು ಉಪಸ್ಥಿತರಿದ್ದರು.