ಶನಿವಾರಸಂತೆ, ಏ. 17: ಜಗತ್ತನ್ನೇ ಸುಂದರವಾಗಿಸಬಲ್ಲ ಶಕ್ತಿ ಚಿತ್ರಕಲೆಗಿದೆ ಎಂದು ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಿ.ಎಸ್. ಮಧುಕುಮಾರ್ ಅಭಿಪ್ರಾಯಪಟ್ಟರು.

ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಬೇಸಿಗೆ ಶಿಬಿರದಲ್ಲಿ ನಡೆದ ವಿಶ್ವ ಚಿತ್ರಕಲಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾ. 15 ಜಗತ್ಪ್ರಸಿದ್ಧ ಮೊನಾಲಿಸಾ ಚಿತ್ರದ ಕರ್ತೃ ಲಿಯೊನಾರ್ಡೊ ಡ ವಿಂಚಿ ಹುಟ್ಟಿದ ದಿನವನ್ನೇ ವಿಶ್ವ ಚಿತ್ರಕಲಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಮಧುಕುಮಾರ್ ತಿಳಿಸಿದರು.

ನಿಡ್ತ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ದಿನೇಶ್ ಮಾತನಾಡಿ, ಚಿತ್ರಕಲೆಯ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ನಂತರ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ದಿನವಿಡೀ ಕುಂಚ ಹಿಡಿದು ಬಣ್ಣಗಳೊಂದಿಗೆ ಆಟವಾಡಿದರು. ಸಹಶಿಕ್ಷಕ ಸಿ.ಎಸ್. ಸತೀಶ್ ಮಾರ್ಗದರ್ಶನದಲ್ಲಿ ರೇಖಾಚಿತ್ರ, ಪೆನ್ಸಿಲ್ ಶೇಡಿಂಗ್, ಪರಿಸರ ಚಿತ್ರಣ, ರದ್ದಿಕಾಗದದಿಂದ ಶಿಲ್ಪಗಳನ್ನು ತಯಾರಿಸಿದರು.

ಶಿಬಿರಾರ್ಥಿಗಳು ಉಬ್ಬುಶಿಲ್ಪ ಮತ್ತು ಅಚ್ಚುಶಿಲ್ಪಗಳ ಮಾಹಿತಿ ಪಡೆದರು. ಬಹು ವಿಶೇಷತೆಯಿಂದ ನಿರ್ಮಿಸಿರುವ ಗುಡಿಸಿಲಿನ ಮಾದರಿಯೊಳಗೆ ವಿವಿಧ ಚಿತ್ರಗಳನ್ನು ಪ್ರದರ್ಶಿಸಿದರು. ಕೇವಲ ಪೆನ್ಸಿಲ್ ಶೇಡಿಂಗ್‍ನಿಂದ ಬಿಡಿಸಿದ ಮೊನಾಲಿಸಾ ಚಿತ್ರ ಆಕರ್ಷಣೆಯ ಕೇಂದ್ರವಾಗಿತ್ತು. ಜತೆಗೆ ರಾಷ್ಟ್ರೀಯ ನಾಯಕರು, ಪ್ರಸಿದ್ಧ ಚಿತ್ರನಟ-ನಟಿಯರ ಚಿತ್ರಗಳು, ಸುಂದರ ಪರಿಸರದ ಚಿತ್ರಗಳು ಗಮನ ಸೆಳೆದವು.