ಅಮ್ಮತ್ತಿ, ಏ. 17: ಅಮ್ಮತ್ತಿ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಕೊಡವ ಸಮಾಜದ ನಿರ್ದೇಶಕಿ ಹಾಗೂ ಪೊಮ್ಮಕ್ಕಡ ನಾಳ್ ಕಾರ್ಯಕ್ರಮದ ಸಂಚಾಲಕಿ ಮಚ್ಚಾರಂಡ ಶಾಲಿ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ಮಹಿಳೆಯರಿಗೆ ತರಕಾರಿ ಕೆತ್ತನೆ, ಬೇಕಿಂಗ್ ತರಬೇತಿ, ಮೊಕ್‍ಟೈಲ್ ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ಅವರು ಮಾತನಾಡಿ, ಮಹಿಳೆಯರು ಮನೆಯಲ್ಲಿದ್ದರೂ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿ ಯಾವದಾದರೊಂದು ಉತ್ತಮ ಕಾರ್ಯನಿರ್ವಹಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಮತ್ತೋರ್ವ ಅತಿಥಿ ನೆಕ್ಟ್‍ಫ್ರೆಷ್ ಹನಿ ಸಂಸ್ಥೆಯ ಕುಪ್ಪಂಡ ಛಾಯಾ ನಂಜಪ್ಪ ಅವರು ಮಹಿಳೆಯರು ಮನೆ ಕೆಲಸದಲ್ಲಿ ಮಾತ್ರ ನಿರತರಾಗದೆ ಔದ್ಯೋಗಿಕವಾಗಿಯೂ ತೊಡಗಿಸಿ ಕೊಂಡು ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾನಿಲಯದ ಮಂಡೇಪಂಡ ಡಾ. ಕಾವೇರಿ ಮಂದಣ್ಣ ಅವರು, ಆರ್ಕಿಡ್ ಬೆಳೆಯ ಕುರಿತು ಪ್ರಾತ್ಯಕ್ಷಿಕೆ ಸಹಿತವಾಗಿ ಮಹಿಳೆಯರಿಗೆ ಉಪಯುಕ್ತ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಚ್ಚಾರಂಡ ಶಾಲಿ ಬೋಪಣ್ಣ ಅವರು, ಕೇವಲ ಸ್ವಾರ್ಥ ಮನೋಭಾವ ಹೊಂದದೆ ಮಹಿಳೆಯರು ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಿರಬೇಕು. ಮಹಿಳೆಯ ರಲ್ಲಿ ಈ ವಿಶೇಷ ಸಾಮಥ್ರ್ಯವಿದೆ ಎಂದು ಅಭಿಪ್ರಾಯಪಟ್ಟರು.
ತರಕಾರಿ ಕೆತ್ತನೆಯ ತೀರ್ಪುಗಾರರಾಗಿ ಮಂಡೇಪಂಡ ಬಿಂದು ಅಯ್ಯಣ್ಣ ಹಾಗೂ ಮನೆಯಪಂಡ ವಿವಿನ್ ಅಯ್ಯಣ್ಣ ಅವರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಯೋಜಕ ಸಮಿತಿಯ ಪ್ರಮುಖರಾದ ಮೂಕೋಂಡ ಕಲ್ಪನಾ ದೇವಯ್ಯ, ಕುಟ್ಟಂಡ ರುಕ್ಕು ಅಯ್ಯಪ್ಪ, ಮೊಳ್ಳೆರ ಜೂಬಿ ಅಪ್ಪಚ್ಚು, ನೆಲ್ಲಮಕ್ಕಡ ರೂಪಾ ದೇವಯ್ಯ, ಬಲ್ಟಿಕಾಳಂಡ ನಳಿನಿ ಮೇದಪ್ಪ, ಪಾಲಚಂಡ ರೇಷ್ಮ ಮುತ್ತಣ್ಣ, ಮಂಡೇಪಂಡ ಪೂನಂ ಉತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಚೋವಂಡ ಜಮುನಾ ಸುರೇಶ್ ಪ್ರಾರ್ಥಿಸಿ, ಸಮಾಜದ ನಿರ್ದೇಶಕಿ ಮಂಡೇಪಂಡ ಗೀತಾ ಮಂದಣ್ಣ ವಂದಿಸಿದರು. ಬೆಳಿಗ್ಗೆಯಿಂದ ಸಂಜೆತನಕ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಅಮ್ಮತ್ತಿ - ಕಾವಾಡಿ ಮಹಿಳಾ ತಂಡದ ಸದಸ್ಯರಿಂದ ಕಿರು ನಾಟಕ ಪ್ರದರ್ಶನ ನೆರವೇರಿತು.