ಪೊನ್ನಂಪೇಟೆ, ಏ. 17 : ಜನತಾ ಪರಿವಾರದ ಹಿರಿಯ ನಾಯಕ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವದನ್ನು ತಾವು ಸ್ವಾಗತಿಸುವದಾಗಿ ಹೇಳಿರುವ ಕೊಡಗು ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ಗೋಣಿಕೊಪ್ಪಲಿನ ಜೆ.ಎ. ಕರುಂಬಯ್ಯ ಅವರು, ನಾಣಯ್ಯ ಅವರ ಸೇರ್ಪಡೆಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಂ.ಸಿ. ನಾಣಯ್ಯ ಅವರು ತಮ್ಮ ಬೆಂಬಲಿಗರ ಜೊತೆಗೂಡಿ ಪಕ್ಷದ ಅಭ್ಯಥಿಗಳ ಪರವಾಗಿ ಕೆಲಸ ಮಾಡಿ ಅವರ ವಿಜಯಕ್ಕೆ ನೆರವಾಗಬೇಕು ಎಂದು ಮನವಿ ಮಾಡುವದಾಗಿ ಹೇಳಿದರು.

ಹಿಂದಿನಿಂದಲೂ ಎಂ.ಸಿ. ನಾಣಯ್ಯ ಅವರ ಬೆಂಬಲಿಗರಾಗಿರುವ ಜಿಲ್ಲಾ ಜೆ.ಡಿ.(ಎಸ್) ಮಾಜಿ ಅಧ್ಯಕ್ಷರಾದ ಅಜ್ಜಿಕುಟ್ಟೀರ ಎಸ್. ಶಾಂತು ಅಪ್ಪಯ್ಯ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಮಾಜಿ ಅಧ್ಯಕ್ಷರಾದ ಮಾತಂಡ ಎ. ರಮೇಶ್, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ಕೆ. ವಿಷ್ಣು ಕಾರ್ಯಪ್ಪ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮದ್, ಗೋಣಿಕೊಪ್ಪಲಿನ ಹಿರಿಯ ಅಲ್ಪಸಂಖ್ಯಾತ ಮುಖಂಡ ಕೆ. ಅಹಮದ್ ಬಾಳೆಲೆ ಸೇರಿದಂತೆ ವಿವಿಧ ಮುಖಂಡರು ನಾಣಯ್ಯ ಅವರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಇವರನ್ನೂ ಕೂಡ ಪಕ್ಷಕ್ಕೆ ಸ್ವಾಗತಿಸುವದಾಗಿ ಹೇಳಿರುವ ಜೆ.ಎ. ಕರುಂಬಯ್ಯ ಅವರು, ಇವರೆಲ್ಲರ ಸೇರ್ಪಡೆಯಿಂದ ಕೊಡಗಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೇರಿರುವ ಎಂ.ಸಿ. ನಾಣಯ್ಯ ಅವರ ಬೆಂಬಲಿಗರು ಈ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಗಬೇಕು. ಮುಂದೆ ಇವರಿಗೆ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸೂಕ್ತ ಸ್ಥಾನಮಾನಗಳನ್ನು ನೀಡುವಂತಾಗಬೇಕು ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿದ ಕರುಂಬಯ್ಯ ಅವರು, ಮುಂದೆ ಪಕ್ಷದಲ್ಲಿ ಅವರನ್ನು ನಾಣಯ್ಯ ಅವರ ಬೆಂಬಲಿಗರೆಂದು ಪ್ರತ್ಯೇಕವಾಗಿ ಗುರುತಿಸುವಂತಾಗಬಾರದು. ಇನ್ನು ಏನಿದ್ದರೂ ಅವರೆಲ್ಲಾ ಕಾಂಗ್ರೆಸ್‍ನ ನಿಷ್ಠಾವಂತರು. ಮುಂದಿನ ವಿವಿಧ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದರೆ ಅವರೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳೆಂದೇ ಪರಿಗಣನೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.