ಚೆಟ್ಟಳ್ಳಿ, ಏ. 17: ಅವನೊಬ್ಬ ಯುವ ಕಲೆಗಾರ. ತನ್ನ ಮನಸ್ಸಿಗೆ ಮೂಡಿದ ಹಲವು ಕಲೆಗಳನ್ನೆಲ್ಲ ಮರದ ತುಂಡುಗಳಲ್ಲಿ ಕೆತ್ತಿ ಒಂದು ರೂಪಕ್ಕೆ ತಂದು ಕಲೆಯ ಜೀವ ತುಂಬುತ್ತಿರುವ ಅನೀಶ್. ಮರದ ಕೆತ್ತನೆಯಾಯಿತು ಈಗ ಅಜೀವ ಕಲ್ಲಿಗೆ ರೂಪ ನೀಡಿ ಎಲ್ಲರನ್ನು ಬೆರಗುಗೊಳಿಸುತ್ತಿದ್ದಾನೆ.
ಈ ವ್ಯಕ್ತಿ ಮಡಿಕೇರಿ ಸಮೀಪದ ಚೆಟ್ಟಳ್ಳಿಯ ಪೊನ್ನತ್ಮೊಟ್ಟೆಯ ಪುಟ್ಟ ಊರಿನ ಆಚಾರಿ ಶ್ರೀನಿವಾಸ್ ಹಾಗೂ ಸುಶೀಲ ಎಂಬವರ ಏಕೈಕ ಪುತ. ಅನೀಶ್ಗೆ ಸಣ್ಣಂದಿನಿಂದಲೇ ಕೆತ್ತನೆ ಕಲೆಯಲ್ಲಿ ತೀರಾ ಆಸಕ್ತಿ. ಒಂದೆರಡು ನುರಿತ ಕೆತ್ತನೆಯ ಗುರುಗಳೊಂದಿಗೆ ಗುರುದಕ್ಷಿಣೆ ನೀಡಿ ಕೆತ್ತನೆಯನ್ನು ಕರಗತ ಮಾಡಿಕೊಂಡ. ನಂತರದಲ್ಲಿ ಕೆತ್ತನೆಯ ಸಾಮಗ್ರಿ ಹಿಡಿದು ತನಗೆ ತಾನೇ ಗುರುವಾಗಿ ತನ್ನ ಕಲ್ಪನೆಗೆ ತಕ್ಕಂತೆ ಬೀಟಿ, ನಂದಿ, ತೇಗ ಹಾಗೂ ಹಲಸಿನ ಮರದ ತುಂಡುಗಳಲ್ಲಿ ಸಿಂಹ, ಆನೆ, ಗಂಡಬೇರುಂಡ, ಮೀನು, ಹಾವು, ವಿವಿಧ ಬಗೆಯ ಪಕ್ಷಿಗಳು, ಬಾಗಿಲುಗಳಲ್ಲಿ ಕೆತ್ತನೆ ಹಾಗೂ ಒಂದೇ ಮರದ ಬೇರಿನಲ್ಲಿ 13 ಡಾಲ್ಫಿನ್ ಚೆಂಡಿನೊಂದಿಗೆ ಆಟವಾಡುವ ದೃಶ್ಯ ಮನಸೂರೆಗೊಳ್ಳುವವು.
ಸುಮಾರು 8 ವರ್ಷಗಳಿಂದ ಮರದ ಕೆತ್ತನೆಯಲ್ಲೆ ಮುಳುಗಿದ್ದ ಅನೀಶ್ಗೆ ಕಲ್ಲಿನ ಕೆತ್ತನೆಯನ್ನು ಕರಗತ ಮಾಡಿಕೊಳ್ಳ ಬೇಕೆಂದುಕೊಂಡ. ಕಲ್ಲಿನ ಕೆತ್ತನೆಗಾರರು ಕೊಡಗಿನಲ್ಲಿ ಯಾರಿರದರಿಂದ ಪರಿಚಯಸ್ಥರ ಮಾರ್ಗದರ್ಶನದೊಂದಿಗೆ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಕಾರ್ಕಳದ ಮಯಾರ್ ಎಂಬಲ್ಲಿ ನಡೆಯುತ್ತಿರುವ ಸಿ.ಇ. ಕಾಮತ್ ಇನ್ಸ್ಟ್ಯೂಟ್ ಫಾರ್ ಆರ್ಟಿನ್ಸ್ ಸಂಸ್ಥೆಯಲ್ಲಿ ಕಲ್ಲಿನ ಹಾಗೂ ಮರದ ಕೆತ್ತನೆಯನ್ನು ಒಂದೂವರೆ ವರ್ಷದ ತರಬೇತಿಯಲ್ಲಿ ಕರಗತ ಮಾಡಿದ್ದಾರೆ.
ಮೊದಲೇ ಮರದ ಕೆತ್ತನೆಯ ಬಗ್ಗೆ ತಿಳಿದಿದ್ದ ಅನೀಶ್ನಿಗೆ ಕೆತ್ತನೆಯ ತರಬೇತಿಯಲ್ಲಿ ನುರಿತ ಗುರುಗಳಾದ ಗುಣವಂತೇಶ್ವರ ಭಟ್ ಹಾಗೂ ನಾಗೇಶ್ ಆಚಾರ್ಯ ಅವರ ಮಾರ್ಗದರ್ಶನದೊಂದಿಗೆ ಕೃಷ್ಣ ಶಿಲೆಯಲ್ಲಿ ಹೊಯ್ಸಳ ಶೈಲಿಯ ಮಹಿಷ ಮರ್ದಿನಿ, ದಂನ್ವಂತ್ರಿಯನ್ನು ಹಾಗೂ ಶ್ರೀರಾಮ, ಶಿವಾಜಿ, ಆಂಜನೇಯ ಹಾಗೂ ಮೇಲ್ಬಾಗ ಪಕ್ಷಿ ಪ್ರಾಣಿಗಳನ್ನು ಒಂದೇ ಕಲ್ಲಿನಲ್ಲೂ ಹಾಗೂ ಮರದಲ್ಲಿ ಮಲೇಯ ಮುರುಗನನ್ನು ನಾಜೂಕಾಗಿ ಕೆತ್ತಿ ಗುರುಗಳಿಗೆ ಬೆರಗುಗೊಳಿಸಿದ. ಸುಮಾರು ಮೂರುವರೆ ಅಡಿ ಎತ್ತರದ ಒಂದೇ ಮರದ ತುಂಡಿನಲ್ಲಿ ಡ್ರ್ಯಾಗನ್, ಹಾವು, ಅಳಿಲು, ಕಾಡು ಪಾಪ, ಉಡ ಸೇರಿ 16 ಪ್ರಾಣಿಗಳನ್ನು ಕೆತ್ತಿ ಚಕಿತಗೊಳಿಸಿದ. ಅನೀಶ್ನ ಚಾಕಚಕ್ಯತೆಯ ಕಲ್ಲಿನ ಹಾಗೂ ಮರದ ಕೆತ್ತನೆಯನೆಲ್ಲ ತರಬೇತಿ ಸಂಸ್ಥೆಯಲ್ಲೇ ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ಕಾರ್ಕಳ ರೋಟರಿ ಕ್ಲಬ್ನವರ ಸನ್ಮಾನಕ್ಕೂ ಪಾತ್ರನಾಗಿದ್ದಾನೆ. ಒಂದೂವರೆ ವರ್ಷದ ಕೆತ್ತನೆಯ ತರಬೇತಿ ಮುಗಿಸಿ ಬಂದ ಅನೀಶ್ ತನ್ನ ಸ್ನೇಹಿತರೊಂದಿಗೆ ಸೇರಿ ಕೊಡಗಿನಲ್ಲೇ ಕಲ್ಲಿನ ಹಾಗೂ ಮರದ ಕೆತ್ತನೆಯ ಸಂಸ್ಥೆಯೊಂದನ್ನು ಪ್ರಾರಂಭಿಸಲು ಮುಂದಾಗಿದ್ದಾನೆ. ಕೊಡಗಿನಲ್ಲಿ ಕಲ್ಲಿನ ಹಾಗೂ ಮರದ ಕೆತ್ತನೆಗೆ ಹೆಚ್ಚಿನ ಬೇಡಿಕೆ ಇದ್ದು, ಈಗಾಗಲೇ ದೇವಾಲಯದ ದೇವರ ವಿಗ್ರಹಕ್ಕೆ ಬೇಡಿಕೆ ಬಂದಿದೆ ಎಂದು ಯುವ ಕಲೆಗಾರ ಅನೀಶ್ ಹೇಳುತ್ತಾನೆ.
- ಪುತ್ತರಿರ ಕರುಣ್ ಕಾಳಯ್ಯ