ಮಡಿಕೇರಿ, ಏ. 17: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊನ್ನೆಯಷ್ಟೇ ಟಿಕೆಟ್ ಗಿಟ್ಟಿಸಿಕೊಂಡಿದ್ದ; ವಕೀಲ ಹೆಚ್.ಎಸ್. ಚಂದ್ರಮೌಳಿ ಅವರು ವಿವಾದವೊಂದಕ್ಕೆ ಸಿಲುಕುವದರೊಂದಿಗೆ ಕಾಂಗ್ರೆಸ್ ವರಿಷ್ಠರು ಉಮೇದುವಾರಿಕೆಗೆ ತಡೆಯೊಡ್ಡಿರುವ ಕುರಿತು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.
ತನ್ನ ಟಿಕೆಟ್ ಸ್ಥಗಿತಕ್ಕೆ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರ ಕೈವಾಡವೇ ಕಾರಣ ಎಂದು ವಕೀಲ ಹೆಚ್.ಎಸ್. ಚಂದ್ರಮೌಳಿ ‘ಶಕ್ತಿ’ಯೊಂದಿಗೆ ಆರೋಪಿಸಿದ್ದಾರೆ.
ಈ ನಡುವೆ ಇತರ ಪ್ರಬಲ ಆಕಾಂಕ್ಷಿಗಳಾಗಿದ್ದ ಬ್ರಿಜೇಶ್ ಕಾಳಪ್ಪ, ನಾಪಂಡ ಮುದ್ದಪ್ಪ, ಕೆ.ಪಿ. ಚಂದ್ರಕಲಾ, ಕುಮುದ ಧರ್ಮಪ್ಪ ಹಾಗೂ ಕೆ.ಎಂ. ಲೋಕೇಶ್ ಇವರುಗಳು ಈಗಿನ ವಿದ್ಯಮಾನವನ್ನು ಬಳಸಿಕೊಂಡು ಟಿಕೆಟ್‍ಗಾಗಿ ಮರು ಯತ್ನ ನಡೆಸಿರುವದು ಕಂಡುಬಂದಿದೆ.ಇತ್ತೀಚೆಗೆ ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರ ಪರವಾಗಿ, ವಕೀಲರಾಗಿರುವ ಚಂದ್ರಮೌಳಿ ವಕಾಲತ್ತು ವಹಿಸಿರುವ ಅಂಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಎಐಸಿಸಿ ವರಿಷ್ಠರು ಎಚ್ಚೆತ್ತುಕೊಂಡಿದ್ದಾರೆ.
ಈ ಕೋಟಿ ಹಗರಣದ ಪ್ರಮುಖ ಆರೋಪಿಯೆನ್ನಲಾದ ನೀರವ್ ಮೋದಿ ಸಂಬಂಧಿ, ಮೆಹೂಲ್ ಚೋಕ್ಸಿ ಎಂಬ ವ್ಯಕ್ತಿ ಭಾರತದಿಂದ ವಿದೇಶಕ್ಕೆ ಪಲಾಯನದೊಂದಿಗೆ ಆಪಾದನೆಗೆ ಸಿಲುಕಿದ್ದು, ಈ ಪ್ರಕರಣದಲ್ಲಿ ವಕೀಲ ಚಂದ್ರಮೌಳಿ ವಕಾಲತ್ತು ವಹಿಸಿದ್ದರು ಎನ್ನುವದು ಹೈಕಮಾಂಡ್‍ಗೆ ಸಲ್ಲಿಸಲ್ಪಟ್ಟ ಆಕ್ಷೇಪ.
ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡ ಕೂಡಲೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ವರಿಷ್ಠರು ಇಂದು ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಚಂದ್ರಮೌಳಿ ಅವರನ್ನು ದಿಢೀರ್ ರಾಜಧಾನಿಗೆ ಕರೆಸಿಕೊಂಡಿದ್ದಾರೆ. ಅಲ್ಲದೆ ಅವರಿಗೆ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ.
ಚಿಗುರಿದ ಆಸೆ: ಚಂದ್ರಮೌಳಿ ಟಿಕೆಟ್ ತಡೆಹಿಡಿಯಲ್ಪಟ್ಟಿರುವ ಬೆನ್ನಲ್ಲೇ ಅತೃಪ್ತ ಕಾಂಗ್ರೆಸ್ ಮುಖಂಡರಲ್ಲಿ ಮತ್ತೆ ಟಿಕೆಟ್ ಗಿಟ್ಟಿಸಿಕೊಳ್ಳುವ ಆಸೆ ಗರಿಗೆದರಿದಂತಿದೆ. ವಾಸ್ತವವಾಗಿ ಮಡಿಕೇರಿ ಕ್ಷೇತ್ರದಲ್ಲಿ ಈಗಾಗಲೇ ಬಂಡಾಯದ ಬಾವುಟ ಹಾರಿಸಿರುವ ನಾಪಂಡ ಎಂ. ಮುತ್ತಪ್ಪ; ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಇನ್ನೋರ್ವ ಆಕಾಂಕ್ಷಿ ಬ್ರಿಜೇಶ್ ಕಾಳಪ್ಪ, ಪ್ರಮುಖರಾದ ಕೆ.ಎಂ. ಲೋಕೇಶ್, ಕೆ.ಪಿ. ಚಂದ್ರಕಲಾ ಮುಂತಾದವರು ಮರು ಪ್ರಯತ್ನದಲ್ಲಿದ್ದಾರೆಂದು ಗೊತ್ತಾಗಿದೆ.
ದಿಢೀರ್ ಕರೆ: ಇಂದು ಬೆಳಿಗ್ಗೆಯಿಂದಲೇ ಕೊಡ್ಲಿಪೇಟೆಯಿಂದ ಕುಶಾಲನಗರ ಹಾಗೂ ಇತರೆಡೆ ಸಂಚರಿಸುತ್ತಾ, 11.30ರ ಸುಮಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಚಂದ್ರಮೌಳಿ ನಗರದ ವಿವಿಧ ಮುಖಂಡರೊಂದಿಗೆ ಆಗಷ್ಟೇ ಸಮಾಲೋಚನೆಯಲ್ಲಿ ತೊಡಗಿದ್ದರು.
(ಮೊದಲ ಪುಟದಿಂದ) ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷರಾದ ಜಿ. ಪರಮೇಶ್ವರ್ ಸ್ವತಃ ಕರೆ ಮಾಡಿ, ತುರ್ತು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಈ ಕರೆಯಿಂದ ಗೊಂದಲಕ್ಕೆ ಸಿಲುಕಿದ ಅವರು, ಕೆಲವೇ ನಿಮಿಷಗಳಲ್ಲಿ ನಿಗದಿತ ಸಭೆ ಮೊಟಕುಗೊಳಿಸಿ ತೆರಳಿದ್ದಾಗಿ ಮೂಲಗಳಿಂದ ಗೊತ್ತಾಗಿದೆ.
ಬ್ರಿಜೇಶ್ ಲೇವಡಿ: ಕಾಂಗ್ರೆಸ್‍ನಿಂದ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಕಾಂಗ್ರೆಸ್ ವಕ್ತಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ವಕೀಲ ಬ್ರಿಜೇಶ್ ಕಾಳಪ್ಪ, ತಾನು ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಬಯಸುವದಾಗಿ ಲೇವಡಿ ಮಾಡಿದ್ದಾರೆ. ಅಲ್ಲದೆ ತನಗೆ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಅವಕಾಶ ನೀಡದಿದ್ದರೂ, ಎಲ್ಲವನ್ನೂ ಕಲ್ಪಿಸಿಕೊಟ್ಟಿದೆ ಎಂದು ತೃಪ್ತಿ ವ್ಯಕ್ತಪಡಿಸಿದ್ದಾರೆ.
ಇಂದು ‘ಶಕ್ತಿ’ ಸಂಪರ್ಕಿಸಲಾಗಿ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯಿಸಿ, ತಾನು ಕಳೆದ ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದು, ಪಕ್ಷಕ್ಕೆ ಏನೇನೂ ಕೊಡುಗೆಯಿಲ್ಲದ ತೀರಾ ಹೊಸಬರಿಗೆ ಟಿಕೆಟ್ ನೀಡಿರುವದು ಬೇಸರ ತಂದಿದೆ ಎಂದು ಪುನರುಚ್ಚರಿಸಿದರು. ಇಂದಿನ ಬೆಳವಣಿಗೆ ಕುರಿತು ತನಗೇನೂ ಗೊತ್ತಿಲ್ಲವೆಂದು ಮಾರ್ನುಡಿದರು.
ಕೆ.ಎಂ. ಲೋಕೇಶ್ ಬೆಂಬಲಿಗರಿಂದ ಸಭೆ
ಸೋಮವಾರಪೇಟೆ: ಕಳೆದ 18 ವರ್ಷಗಳಿಂದ ಸೋಮವಾರಪೇಟೆ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರನ್ನು ಗಣನೆಗೆ ತೆಗೆದುಕೊಳ್ಳದೇ ಪಕ್ಷಕ್ಕಾಗಿ ದುಡಿಯದವರಿಗೆ ಹೈಕಮಾಂಡ್ ಟಿಕೆಟ್ ನೀಡಿರುವದು ಸರಿಯಲ್ಲ; ಮುಂದಿನ ಎರಡು ದಿನಗಳಲ್ಲಿ ತಪ್ಪನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮತ್ತೊಮ್ಮೆ ಸಭೆ ನಡೆಸಿ ದಿಟ್ಟ ನಿರ್ಧಾರ ಕೈಗೊಳ್ಳಲೇಬೇಕು ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣಕ್ಕೆ ಸಮೀಪದ ಹೋಂ ಸ್ಟೇವೊಂದರಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪ್ರಬಲ ಟಿಕೆಟ್ ಆಕಾಂಕ್ಷಿ ಕೆ.ಎಂ. ಲೋಕೇಶ್ ಬೆಂಬಲಿಗರ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಸೋಮವಾರಪೇಟೆಯ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದ್ದ ಪಕ್ಷದ ವೀಕ್ಷಕರು ಕಾರ್ಯಕರ್ತರು ಮತ್ತು ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದ ಸಂದರ್ಭ ಸ್ಥಳಕ್ಕೆ ಬಾರದವರಿಗೆ ಇದೀಗ ಟಿಕೇಟ್ ಘೋಷಣೆ ಮಾಡಲಾಗಿದೆ. ಪಕ್ಷಕ್ಕಾಗಿ ಯಾವದೇ ಸೇವೆ ಸಲ್ಲಿಸದ, ಕಾರ್ಯಕರ್ತರೊಂದಿಗೆ ಒಡನಾಟವಿಲ್ಲದವರಿಗೆ ಟಿಕೇಟ್ ನೀಡಿರುವದು ಸರಿಯಲ್ಲ ಎಂದು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವಿಧಾನ ಪರಿಷತ್ ಚುನಾವಣೆಗೆ ಬಂದು ನಂತರ ಕ್ಷೇತ್ರದತ್ತ ಆಗಮಿಸಿಲ್ಲ. ಇದೀಗ ಗೆದ್ದು ಬೆಂಗಳೂರು ಸೇರಿದರೆ ಕಾರ್ಯಕರ್ತರ ಪಾಡೇನು? ಹೈಕಮಾಂಡ್ ಟಿಕೇಟ್ ನೀಡಿದ್ದರಿಂದ ಅವರುಗಳೇ ಬಂದು ಇಲ್ಲಿ ಚುನಾವಣೆ ಎದುರಿಸಲಿ, ನಾವುಗಳು ತಟಸ್ಥರಾಗುಳಿಯುವದು ಅಥವಾ ಬೇರೆ ಪಕ್ಷಗಳತ್ತ ಮುಖ ಮಾಡುವ ಬಗ್ಗೆ ತೀರ್ಮಾನಿಸಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಹಲವು ಮುಖಂಡರು ಅಭಿಪ್ರಾಯಿಸಿದರು.
ಟಿಕೆಟ್ ನೀಡುವ ಸಂದರ್ಭ ಕನಿಷ್ಟ ಸೌಜನ್ಯಕ್ಕಾದರೂ ಲೋಕೇಶ್ ಅವರ ಅಭಿಪ್ರಾಯ ಸಂಗ್ರಹಿಸಿಲ್ಲ; ಕಾಂಗ್ರೆಸ್‍ನ ರಾಜ್ಯಮಟ್ಟದ ನಾಯಕರ ನಿರ್ಧಾರದಿಂದಲೇ ಕೊಡಗಿನಲ್ಲಿ ಕಾಂಗ್ರೆಸ್ ಬೆಳವಣಿಗೆಯಾಗುತ್ತಿಲ್ಲ. ಇದು ಕಾಂಗ್ರೆಸ್ ಅಳಿವು-ಉಳಿವಿನ ಪ್ರಶ್ನೆ. ಹೈಕಮಾಂಡ್ ತಕ್ಷಣ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಹೇಳಿದರು.
ಪಕ್ಷದ ರಾಜ್ಯ ಮುಖಂಡರು ತಕ್ಷಣ ಜಿಲ್ಲೆಗೆ ಆಗಮಿಸಿ, ಟಿಕೆಟ್ ಆಕಾಂಕ್ಷಿಗಳ ಮನವೊಲಿಸುವ ಕಾರ್ಯ ಆಗಬೇಕು. ಪಕ್ಷಕ್ಕಾಗಿ ದುಡಿದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಚಿಂತಿಸಬೇಕು. ಈ ಬಗ್ಗೆ ತಾವೂ ಸಹ ಹೈಕಮಾಂಡ್‍ನೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಯುವ ಕಾಂಗ್ರೆಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಮಿಥುನ್ ಅಭಿಪ್ರಾಯಿಸಿದರು.
ಕೆ.ಎಂ. ಲೋಕೇಶ್ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ವಿಚಾರದಲ್ಲಿ ಇತರ ಆಕಾಂಕ್ಷಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನ ಎಲ್ಲರಲ್ಲೂ ಇದೆ. ಕಾರ್ಯಕರ್ತರು ಮತ್ತು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಮುಖಂಡರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಕಾರ್ಯಕರ್ತರು ಯಾವದೇ ಗೊಂದಲಗಳಿಗೆ ಒಳಗಾಗುವದು ಬೇಡ. ಪಕ್ಷಕ್ಕೆ ಹಿನ್ನಡೆಯಾಗುವ ನಿರ್ಧಾರವನ್ನು ಕಾರ್ಯಕರ್ತರು ತಳೆಯಬಾರದು. ತಾ. 21ರಂದು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮುಖಂಡರನ್ನು ಒಳಗೊಂಡಂತೆ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವದು ಎಂದರು.
ಸಭೆಯಲ್ಲಿ ಮಲ್ಲೇಶ, ಮಧು, ನಾಗೇಶ, ರಾಜು ಮೊದಲಾದವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಉಪಾಧ್ಯಕ್ಷ ಭುವನೇಂದ್ರ, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಮಕೃಷ್ಣ, ಬಸವರಾಜು, ಕಾಂಗ್ರೆಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ವಸಂತ್, ಕುಶಾಲನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರ್, ಯುವ ಕಾಂಗ್ರೆಸ್‍ನ ಹೂವಯ್ಯ, ತಾ.ಪಂ. ಸದಸ್ಯ ಸತೀಶ್, ಪ್ರಮುಖರಾದ ಬ್ಯಾಡಗೊಟ್ಟದ ಜನಾರ್ಧನ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯೆ ಕವಿತ, ಅಬ್ಬೂರುಕಟ್ಟೆಯ ಮೇಘ, ಮಳ್ತೆ ವಸಂತ್, ಬೆಟ್ಟದಳ್ಳಿ ಪವನ್, ವಿನಯ್, ಶಾಂತಳ್ಳಿ ಮಧು, ಕೆ.ಕೆ. ಮುತ್ತಣ್ಣ, ದೊಡ್ಡಮಳ್ತೆ ರಘು, ಬೇಳೂರು ಸುನಿಲ್, ತಾಕೇರಿ ಸುರೇಂದ್ರ, ಅಭಿಮಠದ ರಾಜಪ್ಪ, ಕನ್ನಳ್ಳಿ ಜಗದೀಶ್ ಸೇರಿದಂತೆ 70ಕ್ಕೂ ಅಧಿಕ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ವಕಾಲತು ಕುರಿತು ಸ್ಪಷ್ಟನೆ
ನೀರವ್ ಮೋದಿ ಸಂಬಂಧಿ ಮೆಹೂಲ್ ಜೋಕ್ಸಿ ಪರ ವಕಾಲತು ಕುರಿತು ವಕೀಲ ಹೆಚ್.ಎಸ್. ಚಂದ್ರಮೌಳಿ ‘ಶಕ್ತಿ’ಯೊಂದಿಗೆ ಈ ಕೆಳಗಿನ ಸ್ಪಷ್ಟನೆ ನೀಡಿದ್ದಾರೆ.
ನಾನು ಇದುವರೆಗೂ ಅನೇಕ ಪ್ರಮುಖ ರಾಜಕಾರಣಿಗಳ ಪರ ನ್ಯಾಯಾಲಯದಲ್ಲಿ ವಕಾಲತು ವಹಿಸಿದ್ದೇನೆ. ಕೇವಲ ವೃತ್ತಿಪರ ಕರ್ತವ್ಯದಿಂದ ಈ ಕೆಲಸ ಮಾಡಿದ್ದೇನೆಯೇ ಹೊರತು ಇದರಲ್ಲಿ ಯಾವದೇ ಸ್ವಹಿತಾಸಕ್ತಿಯಿಲ್ಲ. 2015ರಲ್ಲಿ ಹರಿಪ್ರಸಾದ್ ಎಂಬವರು ತಮಗೆ ಬೆಂಗಳೂರಿನ ಗೀತಾಂಜಲಿ ಜೆಮ್ಸ್ ಸಂಸ್ಥೆಯ ಮೆಹೂಲ್ ಚೋಕ್ಸಿಯಿಂದ ವಂಚನೆಯಾಗಿರುವದಾಗಿ ದೂರು ಸಲ್ಲಿಸಿದ್ದರು. ಆ ಸಂದರ್ಭ ಬೆಂಗಳೂರು ಕೇಂದ್ರ ಪೊಲೀಸರು ತನಿಖೆ ನಡೆಸಿ ಪ್ರಕರಣವನ್ನು ‘ಬಿ’ ವರದಿ ಮಾಡಿದ್ದರು. ಇದರ ವಿರುದ್ಧ ಹರಿಪ್ರಸಾದ್ ನ್ಯಾಯಾಲಯದ ಮೊರೆ ಹೊಕ್ಕು ಸರಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ತನಗೆ ಆಕಸ್ಮಿಕವಾಗಿ ಮತ್ತೊಬ್ಬ ವಕೀಲರ ಮೂಲಕ ಆರೋಪಿತ ವ್ಯಕ್ತಿ ಮೆಹೂಲ್ ಚೋಕ್ಸಿ ಪರ ವಾದಿಸುವ ಸಂದರ್ಭ ಒದಗಿತು. ಆಗ ತಾನು ವಾದಿಸಿದ್ದಷ್ಟೆ. ಪೊಲೀಸರು ‘ಬಿ’ ವರದಿ ಮಾಡಿದ ಬಳಿಕ ಮತ್ತೆ ಸಿಐಡಿ ತನಿಖೆಗೆ ನೀಡಿರುವದು ಎಷ್ಟು ಸಮಂಜಸ? ಆದರೆ, ನ್ಯಾಯಾಲಯ ಮೆಹೂಲ್ ಜೋಕ್ಸಿ ವಿರುದ್ಧವೇ ತೀರ್ಪು ನೀಡಿತು. ಆ ಮೊಕದ್ದಮೆಯಲ್ಲಿ ತನ್ನ ಪಾತ್ರ ಕೇವಲ ವಕೀಲನಾಗಿ ಮಾತ್ರ. ಈಗ ಕೆಲವರು ತನ್ನನ್ನೇ ಕ್ರಿಮಿನಲ್ ಎಂಬಂತೆ ಬಿಂಬಿಸುತ್ತಿರುವದು ನೋವುಂಟು ಮಾಡಿದೆ. ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ತನ್ನ ವಿರುದ್ಧ ಹೈಕಮಾಂಡ್‍ಗೆ ಪ್ರಚೋದನೆ ನೀಡಿ ಟಿಕೆಟ್ ತಡೆ ಹಿಡಿದಿದ್ದಾರೆ ಎಂದು ಚಂದ್ರಮೌಳಿ ಆರೋಪಿಸಿದರು.
ತಾನು ಪಕ್ಷದ ಹಿರಿಯ ಮುಖಂಡರು, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅವರನ್ನು ಒಪ್ಪಿಸುವ ಪ್ರಯತ್ನ ಮಾಡುವದಾಗಿ ಚಂದ್ರಮೌಳಿ ತಿಳಿಸಿದರು. ಇಷ್ಟಾಗಿಯೂ ಕೇಳದಿದ್ದರೆ ತಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯುವದಾಗಿಯೂ ಸ್ಪಷ್ಟಪಡಿಸಿದರು. ಕೊಡಗಿನಲ್ಲಿ ಅಭಿವೃದ್ಧಿ ಪರವಾಗಿ ಕೆಲವೊಂದು ಸುಧಾರಣೆಗಳನ್ನು ತರುವ ಬಯಕೆ ತನ್ನದಾಗಿತ್ತು ಎಂದು ಮುಕ್ತ ನುಡಿಯಾಡಿದರು.
ಮರಳಿ ಪ್ರಯತ್ನಿಸುವೆ: ಇಂದಿನ ಬೆಳವಣಿಗೆ ಕುರಿತು ನಾಪಂಡ ಎಂ. ಮುತ್ತಪ್ಪ ಅವರ ಬಳಿ ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ, ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷದ ಟಿಕೆಟ್‍ಗಾಗಿ ಮರಳಿ ಪ್ರಯತ್ನ ಮಾಡುತ್ತಿರುವದಾಗಿ ತಿಳಿಸಿದರು. ಹಿರಿಯರು ಅವಕಾಶ ಮಾಡಿಕೊಡುವ ಭರವಸೆ ಇಟ್ಟಿರುವದಾಗಿ ನುಡಿದರಲ್ಲದೆ, ಟಿಕೆಟ್ ಕಲ್ಪಿಸದಿದ್ದರೂ ಉಮೇದುವಾರಿಕೆಯಿಂದ ಹಿಂದೆ ಸರಿಯುವದಿಲ್ಲವೆಂದು ಪುನರುಚ್ಚರಿಸಿದರು.
ಕಾದು ನೋಡುವೆ: ಈಗಾಗಲೇ ಸ್ಪರ್ಧಾಕಾಂಕ್ಷಿಯಾಗಿರುವ ತಾನು ಕಾದು ನೋಡುವೆ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಬ್ರಿಜೇಶ್ ಕಾಳಪ್ಪ, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವದೇ ನಿರ್ಧಾರವನ್ನು ತಾನು ಸ್ವಾಗತಿಸುವದಾಗಿ ಮಾರ್ನುಡಿದರು.
ಪ್ರಯತ್ನಿಸುತ್ತಿದ್ದೇನೆ: ಪ್ರಬಲ ಆಕಾಂಕ್ಷಿ ಹಾಗೂ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ಅಭಿಪ್ರಾಯ ನೀಡುತ್ತಾ, ಕಾಂಗ್ರೆಸ್ ವರಿಷ್ಠರ ಮೇಲೆ ಇನ್ನೂ ವಿಶ್ವಾಸವಿದ್ದು, ತನಗೆ ಟಿಕೆಟ್ ಕಲ್ಪಿಸುವ ಭರವಸೆಯಿಂದ ನಿರಂತರ ಪ್ರಯತ್ನ ಮುಂದುವರಿಸುವದಾಗಿ ಪ್ರತಿಕ್ರಿಯಿಸಿದರು.
ತನಗೆ ವಿಶ್ವಾಸವಿದೆ: ಮಡಿಕೇರಿ ವಿಧಾನಸಭಾ ಕ್ಷೇತ್ರದವನ್ನು ಈ ಬಾರಿ ಕಾಂಗ್ರೆಸ್‍ನಿಂದ ಲಿಂಗಾಯಿತ ಅಭ್ಯರ್ಥಿಗೆ ಬಿಟ್ಟುಕೊಡುವ ನಿರ್ಧಾರದಂತೆ, ಚಂದ್ರಮೌಳಿ ಟಿಕೆಟ್ ವಂಚಿತರಾದರೆ ತನಗೆ ಲಭಿಸುವ ವಿಶ್ವಾಸವಿದೆ ಎಂದು ಇನ್ನೋರ್ವ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಪ್ರತಿಕ್ರಿಯಿಸಿದ್ದಾರೆ. ತಾನು ಈ ವಿಚಾರದಲ್ಲಿ ಯಾರಿಗೂ ನೋಯಿಸಲು ಇಚ್ಚಿಸದೆ ಸಹಜ ಪ್ರಯತ್ನದಲ್ಲಿರುವೆ ಎಂದರು.
ಪ್ರಬಲ ಆಕಾಂಕ್ಷಿ: ಕಳೆದ ಸಾಲಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತಾನು ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿರುವೆ ಎಂದು ಪಕ್ಷದ ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಚಂದ್ರಮೌಳಿ ಟಿಕೆಟ್ ತಡೆಹಿಡಿದಿರುವ ವರಿಷ್ಠರು, ಪ್ರಾಮಾಣಿಕ ನೆಲೆಯಲ್ಲಿ ತನಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಕೈ ತಪ್ಪಿದರೆ ಸೂಕ್ತ ಸಮಯದಲ್ಲಿ ಕಾರ್ಯಕರ್ತರೊಂದಿಗೆ ನಿರ್ಧಾರ ಪ್ರಕಟಿಸಲಿರುವದಾಗಿ ಸುಳಿವು ನೀಡಿದರು.
ಇಂದಿನ ಬೆಳವಣಿಗೆಯಿಂದ ಕಾಂಗ್ರೆಸ್‍ನಲ್ಲಿ ಸಂಚಲನದೊಂದಿಗೆ ಹೊಸ ಬೆಳವಣಿಗೆ ಕಾಣಿಸಿಕೊಂಡಿದ್ದು, ಅನೇಕರು ತೆರೆಮರೆಯಲ್ಲಿ ತಮ್ಮದೇ ಶೈಲಿಯ ತಂತ್ರಗಾರಿಕೆಯಲ್ಲಿ ಮುಂದಾಗಿರುವದು ಗೋಚರಿಸಿದೆ.