ಮಡಿಕೇರಿ, ಏ. 17: ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ಕರ್ನಾಟಕದ ಜನ ಈ ಬಾರಿ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎನ್. ಯೋಗೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದು, ಹುಸಿ ಭರವಸೆಗಳಿಂದ ದಲಿತ ಸಮುದಾಯ ಕೂಡ ರೋಸಿ ಹೋಗಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಪಕ್ಷಗಳಿಂದ ಪ್ರತಿಯೊಂದು ವಿಚಾರಕ್ಕೂ ದೆಹಲಿಯ ಕಡೆ ಮುಖ ಮಾಡಬೇಕಾಗಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಆದ್ದರಿಂದ ನಮ್ಮ ರಾಜ್ಯವನ್ನು “ರಾಷ್ಟ್ರೀಯ ಪಕ್ಷ ಮುಕ್ತ ಕರ್ನಾಟಕ”ವನ್ನಾಗಿ ಪರಿವರ್ತಿಸುವ ಕಾಲ ಸನ್ನಿಹಿತವಾಗಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗಳಿಗೆ ಸಂವಿಧಾನದ ಮೂಲಕ ರಕ್ಷಣೆ ನೀಡಿದ ಡಾ. ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಬೆಲೆ ಮತ್ತು ರಕ್ಷಣೆ ಇಲ್ಲದಾಗಿದ್ದು ಖಂಡನೀಯವೆಂದರು. ಕರ್ನಾಟಕ ರಾಜ್ಯದಲ್ಲೂ ಕಳೆದ 5 ವರ್ಷಗಳಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಹಿರಿಯ ಅಧಿಕಾರಿಗಳಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾಗ ಸಾಲ ಮನ್ನಾ ಎಂಬ ನಾಟಕವಾಡಿ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದಾರೆ ಎಂದರು.

ಜಾತಿ, ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುವ ಕಾರ್ಯದಲ್ಲಿ ಯಶಸ್ವಿಯಾದ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಮು ಸೌಹಾರ್ದತೆಯನ್ನು ಸ್ಥಾಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮತ ಬೇಟೆ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಅಶಾಂತಿಯನ್ನು ಮೂಡಿಸಿರುವದಲ್ಲದೆ ಚುನಾವಣಾ ವರ್ಷದಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ಪೊಳ್ಳು ಪ್ರೀತಿಯನ್ನು ಪ್ರದರ್ಶಿಸುತ್ತಿವೆ ಎಂದು ಯೋಗೇಶ್ ಕುಮಾರ್ ಆರೋಪಿಸಿದರು. ಕೊಡಗಿನ ದಲಿತರು ಪ್ರಜ್ಞಾವಂತರಾಗಿದ್ದು, ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‍ನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಲಕ್ಷ್ಮೀಕಾಂತ್, ಪ್ರಸಾದ್ ಹಾಗೂ ರಾಚಯ್ಯ ಉಪಸ್ಥಿತರಿದ್ದರು.