ಮಡಿಕೇರಿ, ಏ. 17: ಕೊಡಗು ಜಿಲ್ಲೆ ತುಳುವೆರ ಜನಪದ ಕೂಟ ಹಾಗೂ ಬಿಸು ಪರ್ಬ ಸಂತೋಷ ಕೂಟ ಸಮಿತಿ ಆಶ್ರಯದಲ್ಲಿ ಇಲ್ಲಿನ ಕಾವೇರಿ ಹಾಲ್‍ನಲ್ಲಿ ಇಂದು ತುಳು ಭಾಷಿಕರ ಬಿಸು ಹಬ್ಬದ ಪ್ರಯುಕ್ತ ಸಂತೋಷ ಕೂಟ ಏರ್ಪಡಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಜನಪದೀಯ ಸಂಸ್ಕøತಿ, ಕಲೆ, ಆಚಾರ, ವಿಚಾರ, ಪದ್ಧತಿ, ಪರಂಪರೆಯ ಸೊಗಡನ್ನು ಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡು ನೆರೆದವರ ಮನಸೂರೆಗೊಂಡಿತು. ಕೊಡಗಿನ ಉದ್ದಗಲಕ್ಕೂ ನೆಲೆಸಿರುವ ತುಳು ಭಾಷಾ ಕುಟುಂಬ ಸದಸ್ಯರು ಸುಮಾರು 13 ಜನಾಂಗಗಳ ಸಮ್ಮಿಲನದೊಂದಿಗೆ ತಮ್ಮ ಪರಂಪರೆಯ ಹಿನ್ನೆಲೆಯನ್ನು ಮೆಲುಕು ಹಾಕುವ ಕ್ಷಣಕ್ಕೆ ಸಾಕ್ಷಿಯಾದರು.

ವಿಶೇಷವಾಗಿ ಭೂಸಿರಿಯಿಂದ ಮಂಗಲಕರ ಫಲಗಳ ಸಂಕೇತವಾಗಿ ಬೆಳೆಯುವ ತೆಂಗು, ಕಂಗು, ತಾಳೆ, ಬಾಳೆಯೊಂದಿಗೆ ವೀಳ್ಯದೆಲೆಯಿಂದ ರೂಪಿಸಿದ್ದ ವಿಶೇಷ ತೋರಣ ಎಲ್ಲರನ್ನೂ ಮನೋಲ್ಲಾಸದಿಂದ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿತ್ತು. ತುಳುನಾಡಿನ ಜೀವನ ಶೈಲಿಯನ್ನು ಪ್ರತಿರೂಪಿಸುವ ಉಡುಗೆ-ತೊಡುಗೆಗಳೊಂದಿಗೆ ಚಿಣ್ಣರ ಸಹಿತ ಪುರುಷ-ಮಹಿಳೆಯರು ಧಿರಿಸು ತೊಟ್ಟು ಪರಸ್ಪರ ಕುಶಲೋಪರಿ ಹಂಚಿಕೊಂಡರು.

ಹೊಸ ವರುಷದ ಹರುಷಕ್ಕೆ ಸಾಕ್ಷಿಯಾಗಿ ರೂಪುಗೊಂಡಿದ್ದ ಕಾರ್ಯಕ್ರಮ ವೇದಿಕೆಯು ತುಳುನಾಡಿನ ಶ್ರೀಮಂತಿಕೆಯ ಜಾನಪದ, ಯಕ್ಷಗಾನ ಕಲೆಗಳನ್ನು ಬಿಂಬಿಸಿದರೆ, ತೆಂಗಿನ ಗೊಂಚಲು, ಅಡಿಕೆ ಹೂ ಸಹಿತ ಹಳೆಯ ಕಾಲದ ಮರದ ಪರೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷ್ಮೀ ಸ್ವರೂಪ ಭತ್ತದ ಧಾನ್ಯವು ಗಮನ ಸೆಳೆಯುತ್ತಿತ್ತು.

ಬೆಳಿಗ್ಗೆಯಿಂದಲೇ ಕಾರ್ಯಕ್ರಮ ಸಭಾಂಗಣದತ್ತ ಸಾಗಿ ಬರುವವರಿಗೆ ದಕ್ಷಿಣ ಕನ್ನಡದ ಅಥವಾ ತುಳು ಸಂಪ್ರದಾಯದ ಹಿಮ್ಮೇಳ ಧನಿ ನಿನಾದದಿಂದ ಸ್ವಾಗತವಾಗುತ್ತಿತ್ತು. ಜಿಲ್ಲೆಯ ವಿವಿಧೆಡೆ ತೋಟಗಳಲ್ಲಿ ದುಡಿಯುವ ಸಾಮಾನ್ಯ ಕುಟುಂಬಗಳ ಸಹಿತ ಸಮಾಜದ ಹಲವು ರಂಗದಲ್ಲಿ ತೊಡಗಿಸಿಕೊಂಡು ಕಾವೇರಿ ನಾಡಿನ ಉದ್ದಗಲಕ್ಕೂ ನೆಲೆಸಿರುವ ಈ ವಿಶಿಷ್ಟ ಸಂಸ್ಕøತಿಯ ವಾರಿಸುದಾರರಾಗಿರುವ ತುಳು ಬಾಂಧವರು ಪರಸ್ಪರ ಹರುಷ ದಿಂದ ಒಬ್ಬರನ್ನೊಬ್ಬರು ಸ್ವಾಗತಿಸಿ ಬರಮಾಡಿಕೊಂಡು ಸಂಭ್ರಮಿಸಿದರು.

ವಿಶೇಷವಾಗಿ ತುಳುನಾಡಿನ ತಿನಿಸುಗಳೊಂದಿಗೆ ಭೋಜನ ವ್ಯವಸ್ಥೆಯು ಬಿಸು ಹಬ್ಬದ ಸಂಭ್ರಮಕ್ಕೆ ಸಾಮೂಹಿಕವಾಗಿ ಸಾಮರಸ್ಯದ ಸಂದೇಶ ರವಾನಿಸುತ್ತಾ, ಪ್ರತಿಯೊಬ್ಬರಲ್ಲೂ ಏಕತೆಯ ಭಾವ ಮೂಡಿಸುವಂತಿತ್ತು.

-ಶ್ರೀಸುತ