ಮಡಿಕೇರಿ, ಏ. 17: ದಶಕದ ಹಿಂದೆ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರ ಇಲ್ಲಿನ ವಸತಿ ರಹಿತರಿಗೆ ಮನೆಗಳನ್ನು ಕಲ್ಪಿಸುವ ಪ್ರಸ್ತಾವನೆಯೊಂದಿಗೆ, ಖಾಸಗಿ ಜಮೀನು ಖರೀದಿಸಿ ಯೋಜನೆ ರೂಪಿಸಲು ಮುಂದಾಗಿದ್ದನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ಇದೀಗ ಅದೇ ಜಮೀನಿನಲ್ಲಿ ಹೊರ ರಾಜ್ಯದ ಉದ್ಯಮಿಗಳು ಬೃಹತ್ ವಸತಿ ಬಡಾವಣೆಗೆ ತೊಡಗಿರುವದು ಗೋಚರಿಸಿದೆ.
2002 - 2003ನೇ ಸಾಲಿನಲ್ಲಿ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಕೆ. ಕೃಷ್ಣ ಹಾಗೂ ಅಂದಿನ ಆಯುಕ್ತ ಶಿವಮಲ್ಲು ಎಂಬವರು ಮಂಗಳಾದೇವಿ ನಗರದ ಖಾಸಗಿ ಜಮೀನು 29.668 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ಕಲ್ಪಿಸುವದಾಗಿ ಸಾರ್ವಜನಿಕ ಅರ್ಜಿ ಆಹ್ವಾನಿಸಿದ್ದರು.
ಈ ವೇಳೆ ತಲಾ ರೂ. 50 ರಂತೆ ಪಾವತಿಸಿ ಮಡಿಕೇರಿಯ ಸುಮಾರು 3 ಸಾವಿರ ಮಂದಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಸತಿ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಆ ಬೆನ್ನಲ್ಲೇ ಮಂಗಳಾದೇವಿ ನಗರದ ಖಾಸಗಿ ಒಡೆತನದ ಜಮೀನು ಸರ್ವೆ ನಂ. 543-2 ರಲ್ಲಿ ಮೇಲ್ಕಾಣಿಸಿದ 29.668 ಎಕರೆ ಜಾಗವನ್ನು ಭೂ ಸ್ವಾಧೀನದೊಂದಿಗೆ ಸರ್ವೆಗೆ ಮುಂದಾಗಿತ್ತು.
ಅಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವದರೊಂದಿಗೆ ಆ ದಿನಗಳಲ್ಲಿ ಈ ಜಾಗಕ್ಕೆ ಎಕರೆಯೊಂದಕ್ಕೆ ರೂ. 10 ಲಕ್ಷ ಅಂದಾಜು ಮೌಲ್ಯದಲ್ಲಿ ‘ಮೂಡಾ’ ಖರೀದಿಸಲು ಸರಕಾರ ಆರ್ಥಿಕ ಸಹಾಯ ಒದಗಿಸಲು ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ ಖಾಸಗಿ ಜಮೀನು ಮಾಲೀಕರಿಗೆ ಜಾಗದ ಮೌಲ್ಯ ಪಾವತಿಸುವದು ಸೇರಿದಂತೆ, ಅಂದಾಜು ರೂ. 803.72 ಲಕ್ಷ ಮೊತ್ತದ ವಸತಿ ಯೋಜನೆಗೆ ಭೂ ಸ್ವಾದೀನ ಪ್ರಕ್ರಿಯೆಯನ್ನು ಯಾರು ನಿರ್ವಹಿಸಬೇಕೆಂಬ ಜಿಜ್ಞಾಸೆ ಹುಟ್ಟಿಕೊಂಡಿತ್ತು. ಈ ಬಗ್ಗೆ ಸರಕಾರ ನೇರವಾಗಿ ತಾನು ಪಾತ್ರ ನಿರ್ವಹಿಸುವ ಕುರಿತಾಗಲೀ, ಜಿಲ್ಲಾಧಿಕಾರಿಗಳು ಅಥವಾ ಮೂಡಾ ಆಯುಕ್ತರು ಕ್ರಮ ಜರುಗಿಸಲು ಪ್ರಸ್ತಾಪಿಸಿರಲಿಲ್ಲ.
ಹಾಗಾಗಿ ಈ ಬಗ್ಗೆ ಮೂಡಾ ಆಯುಕ್ತರು ಸರಕಾರ ನಗರಾಭಿವೃದ್ಧಿ ಇಲಾಖೆಗೆ ಸ್ಪಷ್ಟನೆ ಕೋರಿ ಅನೇಕ ಪತ್ರಗಳನ್ನು ರವಾನಿಸಿದ್ದರು. ಆ ಬೆನ್ನಲ್ಲೇ 2006 ರ ವೇಳೆಗೆ ಅಂದಿನ ನಗರಾಭಿವೃದ್ಧಿ ಇಲಾಖೆಯ ಅಂದಿನ ಸರಕಾರದ ಅಧೀನ ಕಾರ್ಯದರ್ಶಿ ಎನ್.ವೈ. ಸಾಗರ್ ಎಂಬವರು ಈ ಯೋಜನೆಯನ್ನು ರದ್ದುಪಡಿಸಿದ್ದರು.
ಆ ಬೆನ್ನಲ್ಲೇ ದಶಕದ ಹಿಂದಿನ ಈ ಯೋಜನೆ ಸ್ಥಗಿತಗೊಂಡಿದ್ದು, ಇದೀಗ ನಗರದಲ್ಲಿ ಸಂಬಂಧಿಸಿದ ಜಮೀನನ್ನು ಹೈದರಾಬಾದ್ ಮೂಲದ ಉದ್ಯಮಿಗಳು ಸ್ಥಳೀಯ ಮಾಲೀಕರಿಂದ ಖರೀದಿಸುವದರೊಂದಿಗೆ ಈ ಹಿಂದೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಾಗ ನೀಡುವದಾಗಿ ಮಾಡಿಕೊಂಡಿದ್ದ ಒಪ್ಪಂದ ಕೂಡಾ ರದ್ದಾಗಿದೆ ಎಂದು ತಿಳಿದುಬಂದಿದೆ.
ಈಗಿನ ನಿಯಮದಲ್ಲಿರುವಂತೆ ಮೂಡಾದಿಂದ ಯಾವದೇ ಮನೆ ಅಥವಾ ನಿವೇಶನ ನವೀಕರಣಕ್ಕೂ ಕಾನೂನಿನ ತೊಡಕು ಇರುವಾಗ, ಮಡಿಕೇರಿ ನಗರದೊಳಗೆ ಎಕರೆಗಟ್ಟಲೆ ಜಮೀನು ವಸತಿ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವದು ಸಾಕಷ್ಟು ಅಚ್ಚರಿ ಉಂಟುಮಾಡಿದೆ.
ಪ್ರಾಧಿಕಾರ ಅಂಗೀಕಾರ: ಈ ಸಂಬಂಧ 8.12.2017 ರಂದು ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಂಗಳಾದೇವಿ ನಗರದ ಎರಡು ಪತ್ಯೇಕ ಸರ್ವೆ ನಂಬರ್‍ಗಳಿಗೆ ಒಳಪಟ್ಟಿರುವ ಜಾಗ ಅಂದಾಜು 38.5 ಎಕರೆಯಲ್ಲಿ ವಸತಿ ಯೋಜನೆಗೆ ಅಂಗೀಕಾರ ನೀಡಿರುವದು ಬಹಿರಂಗಗೊಂಡಿದೆ.
ಈ ಸಂಬಂಧ ಅಪ್ಪರಾವ್ ಮತ್ತು ಸುಬ್ಬಾಯಮ್ಮ ಎಂಬವರಿಂದ ಸಾಯಿಕುಮಾರ್ ಎಂಬ ವ್ಯಕ್ತಿ ಅಧಿಕಾರ ಪತ್ರ ಹೊಂದುವದರೊಂದಿಗೆ ಸರ್ವೆ ನಂ. 542.73 ಹಾಗೂ ಸರ್ವೆ ನಂ. 543/74 ರಲ್ಲಿ ವಸತಿ ಯೋಜನೆಯಡಿ ಬಡಾವಣೆ ರೂಪಿಸಲು ಸಲ್ಲಿಸಿರುವ ಅರ್ಜಿ ಪರಿಶೀಲಿಸಿ ಮಂಜೂರಾತಿ ನೀಡಲಾಗಿದೆ.
ಈ ಯೋಜನೆಯ ಹಿಂದೆ ಹಲವು ಸಂಶಯಗಳು ಹುಟ್ಟಿಕೊಂಡಿದ್ದು, 2003 ರ ಅವಧಿಗೆ ಮೂಡಾದಿಂದ ರೂಪಿಸಿರುವ ಯೋಜನೆಯ ಸರ್ವೆ ನಂ. 543.2 ಎಂದಿದ್ದು, ಹಾಲೀ ಯೋಜನೆಯ ಸರ್ವೆ ನಂ. 543/73 ರಲ್ಲಿ 18.95 ಎಕರೆ ಮತ್ತು ಸರ್ವೆ ನಂ. 543/74 ರಲ್ಲಿ 19.10 ಎಕರೆ ಎಂದು ನಮೂದಾಗಿದೆ.
ಈ ಎಲ್ಲದರ ನಡುವೆ ಮಡಿಕೇರಿ ಹಾಗೂ ಗ್ರಾಮೀಣ ಜನತೆಗೆ ಕನಿಷ್ಟ ಮನೆ ನಿವೇಶನ ಮಂಜೂರಾತಿಗೆ ಕಾನೂನಿನ ತೊಡಕು ಎದುರಾಗಿರುವಾಗ, ಈ ಬೃಹತ್ ವಸತಿ ಯೋಜನೆ ಹೇಗೆ ಸಾಧ್ಯವಾಗಿದೆ ಎಂದು ನಾಗರಿಕರು ಪ್ರಶ್ನೆ ಮುಂದಿಟ್ಟಿದ್ದಾರೆ.