ಮೂರ್ನಾಡು, ಏ. 17: ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ 5ನೇ ವರ್ಷದ ಕ್ರೀಡಾಕೂಟ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮೂರ್ನಾಡು ವಿದ್ಯಾಸಂಸ್ಥೆ ಬಾಚ್ಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಮರಾಠಿ ಪ್ಲಾಂಟರ್ಸ್ ತಂಡ ಪ್ರಥಮ ಹಾಗೂ ಶಿವಾಜಿ ಬ್ರದರ್ಸ್ ಚೆಂಬು ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ವಾಲಿಬಾಲ್ ಪಂದ್ಯದಲ್ಲಿ ಗೂಗ್ಲಿ ಕಾನೂರು ಪ್ರಥಮ ಹಾಗೂ ಮರಾಠಿ ಪ್ಲಾಂಟರ್ಸ್ ದ್ವಿತೀಯ ಬಹುಮಾನ ಗಳಿಸಿಕೊಂಡಿತು. ಮಹಿಳೆಯರ ಥ್ರೋಬಾಲ್‍ನಲ್ಲಿ ಅಂಶಿ ಗಲ್ರ್ಸ್ ಪ್ರಥಮ ಹಾಗೂ ಮಕ್ಕಂದೂರು ಗಲ್ರ್ಸ್ ದ್ವಿತೀಯ ಬಹುಮಾನ ಪಡೆದುಕೊಂಡರು. ಪುರುಷರ ಹಗ್ಗ ಜಗ್ಗಾಟದಲ್ಲಿ ಗೂಗ್ಲಿ ಕಾನೂರು ಪ್ರಥಮ ಮತ್ತು ಕಟ್ಟೆಮಾಡು ಫ್ರೆಂಡ್ಸ್ ದ್ವಿತೀಯ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಅಂಶಿ ಗಲ್ರ್ಸ್ ಪ್ರಥಮ ಹಾಗೂ ಸುಣ್ಣದ ಕೆರೆ ಫ್ರೆಂಡ್ಸ್ ದ್ವಿತೀಯ ಬಹುಮಾನ ಗಳಿಸಿತು.
ಬಳಿಕ ನಡೆದ ಕ್ರೀಡಾಕೂಟ ಸಮಾರೋಪ ಸಮಾರಂಭ ಹಾಗೂ ಸಂಘದ ಮಹಾಸಭೆಯು ಕೊಡಗು ಜಿಲ್ಲಾ ಮರಾಠ - ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಸರಗೋಡು ಕೇರಳ ಮರಾಠಿ ಯುವ ಪೀಳಿಗೆ ಸಂಘ ಸ್ಥಾಪನ ಅಧ್ಯಕ್ಷ ಸುಬ್ರಾಯ ನಾಯ್ಕ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಇರಬೇಕು. ಯುವ ಪ್ರತಿಭೆಗಳು ತಮ್ಮ ಪ್ರತಿಭೆಗಳನ್ನು ಹೊರಹೊಮ್ಮಿಸಲು ಕ್ರೀಡಾಕೂಟಗಳು ಸಹಕಾರಿ ಎಂದರು.
ಪುತ್ತೂರಿನ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಯು.ಕೆ. ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸಮಾಜ ಬಾಂಧವರು ಸಂಘಟನೆ ಆಗದೆ ಇದ್ದ ಪಕ್ಷದಲ್ಲಿ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಮೀಸಲಾತಿ ಗೊಂದಲಕ್ಕೆ ಸಂಘಟನೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಸಮಾಜ ಬಾಂಧವರು ಪ್ರತಿಯೊಬ್ಬರು ಸಂಘಟನೆಗೊಂಡು ಬಲ ಪ್ರದರ್ಶಿಸಬೇಕು ಎಂದರು.
ಶಿವಮೊಗ್ಗ ಪ್ರೋ ಕುವೆಂಪು ವಿ.ವಿ ನಿಲಯದ ಡಾ. ಸುಬ್ರಮಣಿ, ಪುತ್ತೂರು ವಕೀಲರಾದ ಮಂಜುನಾಥ ನಾಯ್ಕ, ಬೆಂಗಳೂರು ಬಸವನಗುಡಿ ಎಸ್.ಬಿ.ಐ ವ್ಯವಸ್ಥಾಪಕಿ ಮೀನಾಕ್ಷಿ ಸೀತಾರಾಮ, ಕೊಡಗು ಜಿಲ್ಲಾ ಮರಾಠ ಮರಾಠಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ.ಟಿ. ದೇವಪ್ಪ, ತಾಳತ್ತಮನೆ ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್. ದಿವ್ಯಕುಮಾರ್, ಪಾಲಂಗಾಲ ಗ್ರಾಮದ ಕೃಷಿಕ ಎಂ.ಕೆ. ಬಾಬು, ಕೊಡಗು ಜಿಲ್ಲಾ ಮರಾಠ ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ, ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಳೆದ ಸಾಲಿನ ವರದಿ, ಲೆಕ್ಕಪತ್ರ ಮಂಡನೆ ಮಾಡಲಾಯಿತು. ಕಳೆದ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ಸದಸ್ಯರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಹಿರಿಯ ಪದಾಧಿಕಾರಿಗಳಾದ ಡಾ. ಸುಬ್ರಮಣಿ, ಸಿ.ಕೆ. ಪ್ರಜ್ಞಾ, ಪೃಥ್ವಿ ನಾಯ್ಕ, ಎಂ.ಎಸ್. ವಿಕಾಸ್ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಭಾರದ ಕಲ್ಲು ಎಸೆತ, ನಿಂಬೆ ಚಮಚ ಓಟ, ಗೋಣಿಚೀಲ ಓಟ, ಸಂಗೀತ ಕುರ್ಚಿ, ಕಪ್ಪೆ ಜಿಗಿತ, ಸೂಜಿಗೆ ನೂಲು ಹಾಕುವ ಓಟದ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು.