ಕೂಡಿಗೆ, ಏ. 17: ಕೃಷಿ ಇಲಾಖೆಯ ವತಿಯಿಂದ ರೈತರು ಬೆಳೆಯುವ ಬೆಳೆಗಳಿಗನುಸಾರವಾಗಿ ಮಣ್ಣು ಪರೀಕ್ಷೆ ನಡೆಸಿ ಅದಕ್ಕೆ ಬೇಕಾಗುವಂತಹ ಪೌಷ್ಟಿಕ ಮತ್ತು ರಸಾಯನಿಕ ರಸಗೊಬ್ಬರಗಳನ್ನು ನೀಡುವದರ ಮುಖಾಂತರ ರೈತರಿಗೆ ವರದಾನವಾಗುವ ದೃಷ್ಟಿಯಿಂದ ಕೂಡಿಗೆಯಲ್ಲಿ 1971 ರಲ್ಲಿ ಪ್ರಾರಂಭಿಸಿ, ಅಂದಿನಿಂದ ಇಂದಿನವರೆಗೆ ಲಕ್ಷಾಂತರ ರೈತರಿಗೆ ಮಾಹಿತಿ ಒದಗಿಸುತ್ತಾ ಬಂದಿದೆ.

ಈ ಕೇಂದ್ರವು ಕಳೆದ ಎರಡು ವರ್ಷಗಳಿಂದ ಹಾಸನ, ಮೈಸೂರು, ಚಿಕ್ಕಮಂಗಳೂರು ಸೇರಿದಂತೆ ದಕ್ಷಣ ಕನ್ನಡ ಜಿಲ್ಲೆಯ ಒಟ್ಟು 12 ತಾಲೂಕುಗಳ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೈತರ ಜಮೀನುಗಳಿಗೆ ಅನುಕೂಲ ವಾಗುವಂತೆ ಮಾಹಿತಿ ನೀಡುತಿತ್ತು.

ನಂತರದ ದಿನಗಳಲ್ಲಿ ಸರಕಾರವು ಎಲ್ಲಾ ತಾಲೂಕುಗಳಿಗೂ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಿದ ಹಿನ್ನೆಲೆ ಈ ಕೇಂದ್ರವು ಕೆಲವು ವರ್ಷಗಳವರೆಗೆ ಸೋಮವಾರಪೇಟೆ ತಾಲೂಕಿಗೆ ಮೀಸಲಾಗಿದ್ದರೂ ನಂತರದ ವರ್ಷಗಳಲ್ಲಿ ಕೊಡಗಿಗೆ ಒಂದೇ ಕೇಂದ್ರವಾಗಿತ್ತು. ತದನಂತರ ರಾಜ್ಯ ಸರ್ಕಾರದ ಹೊಸ ನೀತಿಯಂತೆ ಕೃಷಿ ಇಲಾಖೆಯ ಮೂಲಕ ಜಿಲ್ಲೆಗೊಂದು ಮಣ್ಣು ಆರೋಗ್ಯ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಕೂಡಿಗೆಯಲ್ಲಿ ಮಣ್ಣು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆ ಗೇರಿಸಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರೋಪಕರಣ ಮತ್ತು ಕಂಪ್ಯೂಟರೀಕರಣಗೊಳಿಸುವ ಮೂಲಕ ಈ ಕೇಂದ್ರವು ಸಹಕಾರಿಯಾಗಿದೆ. ಮಣ್ಣು ಪರೀಕ್ಷೆಗಾಗಿ ಪ್ರಯೋಗಾಲಯ ಉಪಕರಣಗಳು ಸೇರಿದಂತೆ ಸುಮಾರು 1 ಎಕರೆ ಭೂಮಿಯಲ್ಲಿ ಇದಕ್ಕೆ ಬೇಕಾದ ಕಟ್ಟಡಗಳು ಮತ್ತು ನೌಕಕರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಟ್ಟಡವನ್ನು ನವೀಕರಣಗೊಳಿಸಿ, ಮಣ್ಣು ಪರೀಕ್ಷೆಗೆ ಬೇಕಾಗುವ ಆಧುನಿಕ ಯಂತ್ರೋಪ ಕರಣಗಳನ್ನು ಅಳವಡಿಸಿದೆ. ಈ ಸಂಸ್ಥೆಯಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್, ದೀಪಕ್, ಅಂಕಿತ, ನಂದೀಶ್ ಸೇರಿದಂತೆ 6 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕೇಂದ್ರದಲ್ಲಿ ಮಣ್ಣು ಮಾದರಿ ವಿಶ್ಲೇಷಣೆ ಹಾಗೂ ನೀರು ಮಾದರಿ ವಿಶ್ಲೇಷಣೆಯನ್ನು ಸಕಾಲದಲ್ಲಿ ಮಾಡಿಕೊಡಲಾಗುವದು. ಈ ಸಾಲಿನಲ್ಲಿ 45 ಸಾವಿರ ರೈತರ ಜಮೀನಿನಲ್ಲಿ ಕೃಷಿ ಇಲಾಖೆ ಮೂಲಕ ಮಣ್ಣು ತಂದು ರೈತರಿಂದ ಶುಲ್ಕವಾಗಿ 8 ರೂಪಾಯಿ ಪಡೆದು ಮಣ್ಣು ಪರೀಕ್ಷೆ ಮಾಡಿಕೊಡಲಾಗುತ್ತಿದೆ. ಅಲ್ಲದೆ, ಸ್ವತಃ ರೈತರು ಈ ಕೆಂದ್ರಕ್ಕೆ ತಂದು ಮಣ್ಣು ಆರೋಗ್ಯ ಪರೀಕ್ಷೆ ಮಾಡಿಸಿದ್ದಲ್ಲಿ 200 ರೂ., ನೀರಿನ ಮಾದರಿ ವಿಶ್ಲೇಷಣೆಗೆ 100 ರೂ.ಗಳನ್ನು ಪಡೆಯಲಾಗುತ್ತಿದೆ. ಮಣ್ಣು ಪರೀಕ್ಷೆಯಿಂದ ಜಮೀನಿನ ಮಣ್ಣಿನ ರಸ ಮತ್ತು ಮಣ್ಣಿನ ಲವಣಾಂಶವನ್ನು ಗುರುತಿಸಿ, ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಭೂಮಿಗೆ ಬಳಸಲು ಈ ಮಣ್ಣಿನ ಆರೋಗ್ಯ ಕೇಂದ್ರದಿಂದ ಪ್ರಯೋಜನವಾಗುತ್ತಿದೆ. 2017-18ನೇ ಸಾಲಿನಲ್ಲಿ ಜಿಲ್ಲೆಯ ರೈತರು ಕಾಫಿ, ಕಾಳುಮೆಣಸು, ಭತ್ತ, ಬಾಳೆ, ಅಡಿಕೆ, ಏಲಕ್ಕಿ ಬೆಳೆಯಲು ಜಮೀನಲ್ಲಿ ಮಣ್ಣು ಮಾದರಿ ಸಂಗ್ರಹಿಸಿ ಪರೀಕ್ಷಿಸಿಕೊಂಡು ಮಣ್ಣು ಆರೋಗ್ಯ ಚೀಟಿಯನ್ನು ಪಡೆದುಕೊಂಡು ಜಮೀನಿಗೆ ಹುಳಿ ಮಣ್ಣಿಗೆ ಸುಣ್ಣ ಹಾಕುವದು, ಮಾಗಿ ಉಳಿಮೆ ಮಾಡುವದು, ಕಾಂಪೋಸ್ಟ್ ಹಸಿರೆಲೆ ಗೊಬ್ಬರ ಬಳಸಬೇಕು.

ಸವಲತ್ತುಗಳನ್ನು ಪಡೆಯಲು ರೈತರಿಗೆ ಇದು ಸಹಕಾರಿಯಾಗಿದೆ ಎಂದು ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ. ಇದೀಗ ಬೆಳೆ ಕಟಾವು ಆಗಿ ಏಪ್ರಿಲ್ ತಿಂಗಳು ಆಗಿರುವದಿಂದ ರೈತರು ಜೂನ್ ತಿಂಗಳಲ್ಲಿ ಬೇಸಾಯ ಮಾಡಲು ಸಿದ್ಧರಾಗುವ ಮುನ್ನ ಜಮೀನಿನ ಮಣ್ಣನ್ನು ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿ ಅದಕ್ಕೆ ಬೇಕಾಗುವ ಪ್ರಧಾನ ಪೋಷಕಾಂಶ, ಲವಣಾಂಶ, ಲಘು ಪೋಷಕಾಂಶಗಳ ಬಗ್ಗೆ ಮಾಹಿತಿ ಪಡೆದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. - ಕೆ.ಕೆ. ನಾಗರಾಜ ಶೆಟ್ಟಿ.