ಕರಿಕೆ:ಏ17, ಕೊಡಗು ಜಿಲ್ಲೆಯಲ್ಲಿ ವಿಶೇಷವಾದ ಭೌಗೋಳಿಕ ಪ್ರದೇಶವಾಗಿ ಗುರುತಿಸಲ್ಪಡುವ ಕರಿಕೆ, ಸಂಪಾಜೆ,ಚೆಂಬು,ಪೆರಾಜೆ ಈ ನಾಲ್ಕು ಗ್ರಾಮಗಳು ಬಹುತೇಕ ಕರಾವಳಿ ಹಾಗೂ ಕೇರಳದ ಹವಾಮಾನ ವನ್ನು ಹೊಂದಿದೆ.ಇಲ್ಲಿಯ ಬಹುತೇಕ ಕೃಷಿಕರು ಸಾವಿರಾರು ಏಕರೆ ತೋಟಗಾರಿಕಾ ಬೆಳೆಯಾದ ಗೇರು ಬೆಳೆ ಅವಲಂಬಿಸಿ ಬದುಕು ಕಟ್ಟಿ ಕೊಂಡಿದ್ದು, ಇದೀಗ ಸಕಾಲದಲ್ಲಿ ಮಳೆಯಾಗದೆ ಬವಣೆ ಪಡುತ್ತಾ, ಸಾಲ ಮಾಡಿ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.

ನವಂಬರ್, ಡಿಸೆಂಬರ್‍ನಲ್ಲಿ ಗೇರು ಹೂ ಬಿಡುವ ಸಮಯವಾಗಿದ್ದು, ಅರಳಲು ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಹೂ ಅರಳುವ ಸಮಯದಲ್ಲಿ ಕೊಡಗಿನ ಕಾಫಿಯಂತೆ ಎರಡು ಮೂರು ಮಳೆ ಆಗಬೇಕಿದ್ದು, ಏಪ್ರಿಲ್ ತಿಂಗಳಿನಲ್ಲಿ ಮಳೆಯಾಗುತ್ತಿದ್ದು, ಮೋಡ, ಬಿಸಿಲಿನ ತಾಪಮಾನದಿಂದ ಹೂಗಳು ಒಣಗಿ ಉದುರಿ ಹೋಗಿವೆ. ಕಳೆದ ಬಾರಿಗಿಂತ ಅರ್ಧ ಫಸಲು ಇಲ್ಲಾದಂತಾಗಿದೆ ಇದರಿಂದ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಇದು ವಾರ್ಷಿಕ ಬೆಳೆಯಾಗಿದ್ದು ಮಳೆಯನ್ನೇ ಅವಲಂಭಿಸಿದೆ, ತೋಟಗಾರಿಕಾ ಬೆಳೆಯಾಗಿ ಗುರುತಿಸಲ್ಪಟ್ಟಿರುವ ಗೇರು ಉತ್ಪನ್ನಗಳಿಗೆ ದೇಶ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ಬೇಡಿಕೆ ಇದ್ದು ಪ್ರಸಕ್ತ ಕಚ್ಚಾ ಗೇರು ಬೀಜಕ್ಕೆ ಕ್ವಿಂಟಾಲ್ ಒಂದಕ್ಕೆ ಹದಿನಾಲ್ಕರಿಂದ ಹದಿನೈದು ಸಾವಿರ ಹಾಗೂ ಗೇರು ಬೀಜದ ಬೇಳೆಗೆ ಇಪ್ಪತ್ತೈದರಿಂದ ಮೂವತ್ತು ಸಾವಿರದಷ್ಟು ಧಾರಣೆ ಇದ್ದು,ಇದರಿಂದ ಇತರೆ ಉತ್ಪನ್ನವಾಗಿ ಗೇರು ಸಿಪ್ಪೆಯಿಂದ ಎಣ್ಣೆ, ಹಣ್ಣಿನಿಂದ ಜ್ಯೂಸ್, ವೈನ್ ಮುಂತಾದ ಉಪ ಉತ್ಪಾದನೆ ತಯಾರಿಸಬಹುದು. ಪ್ರಸ್ತುತ ತೋಟಗಾರಿಕಾ ಇಲಾಖೆಯು ಗೇರು ಬೆಳೆ ಪ್ರೋತ್ಸಾಹಿಸಲು ಗಿಡ ನಾಟಿ ಮಾಡಲು ಮತ್ತು ನಿರ್ವಹಣೆಗೆ ಒಂದು ಹೆಕ್ಟೇರ್ ಗೆ ಇಪ್ಪತ್ತಾರು ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದು, ಇದು ರೈತರಿಗೆ ನಿರ್ವಹಣೆ ಮಾಡಲು ಸಾಕಾÀಗುತ್ತಿಲ್ಲ.

ದ.ಕ. ಅಡಿಕೆ ಬೆಳೆಗೆ ಕ್ಯಾಂಪ್ಕೋ, ಕೊಡಗಿನಲ್ಲಿ ಕಾಫಿ ಬೆಳೆಗೆ ಕಾಫಿ ಮಂಡಳಿಯು ಬೆಳೆಗಾರರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿದ್ದು, ಆದರೆ ಗೇರು ಬೇಳೆಗಾರರ ಬವಣೆ ಯನ್ನು ಆಲಿಸುವವರಿಲ್ಲದೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಇದೀಗ ಕೊಡಗಿನಲ್ಲಿ ಸ್ಪೈಸಸ್ ಅಂಗಡಿಗಳಲ್ಲಿ ಒಣ ಹಣ್ಣುಗಳೊಂದಿಗೆ ಗೇರು ಬೀಜವನ್ನು ಕೂಡಾ ಮಾರಾಟ ಮಾಡುತ್ತಿದ್ದು, ಅತೀ ಹೆಚ್ಚಾಗಿ ಜನ ಹಾಗೂ ಪ್ರವಾಸಿಗರು ಖರೀದಿ ಮಾಡಿ ಸೇವಿಸುತ್ತಿದ್ದು, ಬೇಡಿಕೆ ಹೆಚ್ಚಾಗಿದೆ ಗ್ರಾಮದಲ್ಲಿ ಈ ಬಗ್ಗೆ ಸಂಸ್ಕರಣಾ ಘಟಕ ಸ್ಥಾಪಿಸಲು ಸಾಕಷ್ಟು ಅವಕಾಶವಿದ್ದು, ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕೂಡ ದೊರೆಯಲ್ಲಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಗೇರು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ಉತ್ತಮ ಬೆಲೆ ಮತ್ತು ನಿರ್ವಹಣೆ ಮಾಡಲು ಘಟಕ ಸ್ಥಾಪಿಸಲು ಗಮನಹರಿಸಲು ರೈತರು ಆಗ್ರಹಿಸುತ್ತಿದ್ದಾರೆ.

- ಹೊದ್ದೆಟ್ಟಿ ಸುಧೀರ್