ಕುಶಾಲನಗರ, ಏ. 18: ಕುಶಾಲನಗರ ಬೈಚನಹಳ್ಳಿ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಕೋಟಿಗಟ್ಟಲೆ ಬೆಲೆಬಾಳುವ ಜಾಗ ಸರಕಾರದ ವಶಕ್ಕೆ ತೆಗೆದುಕೊಳ್ಳಲು ಮಡಿಕೇರಿ ಉಪವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶ ನೀಡಿದೆ. ಬೈಚನಹಳ್ಳಿ ಗ್ರಾಮದ ಸರ್ವೆ ನಂ 2/1 ರಲ್ಲಿ ಇಬ್ಬರು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ 1.30 ಎಕರೆ ಮತ್ತು 2.40 ಎಕರೆ ಜಾಗದ ಮೇಲೆ ಕಾವೇರಿ ಸೇನೆ ಸಲ್ಲಿಸಿದ ಅರ್ಜಿ ಮೇರೆಗೆ ಈ ತೀರ್ಪು ಹೊರ ಬಿದ್ದಿದೆ.

(ಮೊದಲ ಪುಟದಿಂದ) 1993 ರಲ್ಲಿ ಸೋಮವಾರಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಕುಶಾಲನಗರದ ಇಬ್ಬರು ವ್ಯಕ್ತಿಗಳಿಗೆ ಮಂಜೂರು ಮಾಡಿದ ಮೇಲೆ ಸಾಗುವಳಿ ಚೀಟಿ ನೀಡಲಾಗಿತ್ತು. ಇದು ಅಕ್ರಮವಾಗಿದ್ದು ಈ ಜಾಗ ಸರಕಾರಕ್ಕೆ ಸೇರಿದ್ದಾಗಿದೆ ಎಂದು ಕಾವೇರಿ ಸೇನೆಯ ಪ್ರಮುಖರಾದ ರವಿ ಚಂಗಪ್ಪ ಮತ್ತು ಪುಲಿಯಂಡ ರಾಮ್ ದೇವಯ್ಯ ಅವರುಗಳು ದಾಖಲೆ ಸಹಿತ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ದಲ್ಲಿ ದಾವೆ ಹೂಡಿದ್ದರು.

ಜಮೀನಿನಲ್ಲಿ ವ್ಯವಸಾಯ ಮಾಡದಿರುವದು, ಸುಳ್ಳು ಮಾಹಿತಿ ನೀಡಿ ಮಂಜೂರು ಮಾಡಿಸಿ ಕೊಂಡಿರುವದು ಹಾಗೂ ಜಮೀನು ಗೋಮಾಳ ಜಮೀನಾಗಿದ್ದು ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವಂತೆ ಕೋರಲಾಗಿತ್ತು. ಪ್ರಸಕ್ತ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಬೇಕೆಂದು ಅರ್ಜಿದಾರರು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದ್ದು ಪ್ರತಿವಾದಿಗಳಾದ ಬಿ.ಎಸ್. ರಾಧಾಕೃಷ್ಣ ಹಾಗೂ ಆರ್.ವಸಂತಮ್ಮ ಇವರುಗಳಿಗೆ ಮಂಜೂರಾದ ಜಮೀನನ್ನು ಕರ್ನಾಟಕ ಭೂಕಂದಾಯ ನಿಯಮಾವಳಿ 1966 ರ ಪ್ರಕಾರ ವಜಾಗೊಳಿಸಿ ಜಮೀನನ್ನು ಎಲ್ಲಾ ಋಣಭಾರಗಳಿಂದ ಮುಕ್ತಗೊಳಿಸಿ ಸರಕಾರದ ವಶಕ್ಕೆ ತೆಗೆದುಕೊಳ್ಳಲು ಆದೇಶಿಸಿದೆ.

ಕೋಟ್ಯಂತರ ಬೆಲೆಬಾಳುವ ಸರಕಾರದ ಆಸ್ತಿ ಉಳಿಸುವಲ್ಲಿ ಕಾವೇರಿ ಸೇನೆ ಯಶಸ್ಸು ಕಂಡಿದ್ದು ತಕ್ಷಣ ಈ ಜಾಗವನ್ನು ಸಂಬಂಧಿಸಿದವರು ವಶಕ್ಕೆ ಪಡೆದುಕೊಳ್ಳಬೇಕು ಎಂದು ಕಾವೇರಿ ಸೇನೆಯ ಖಜಾಂಚಿ ಪುಲಿಯಂಡ ರಾಮ್ ದೇವಯ್ಯ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕುಶಾಲನಗರದ ಪಟ್ಟಣ ಪಂಚಾಯ್ತಿ ಜನಪ್ರತಿನಿಧಿಯೊಬ್ಬರ ಕುಟುಂಬ ಸದಸ್ಯರು ಈ ಪ್ರಕರಣದಲ್ಲಿ ಒಳಗೊಂಡಿದ್ದು ಸರಕಾರದ ಆಸ್ತಿ ಉಳಿಸುವಲ್ಲಿ ಜನಪ್ರತಿನಿಧಿ ಕೂಡಲೆ ಜಾಗವನ್ನು ಹಸ್ತಾಂತರಿಸಬೇಕಾಗಿದೆ ಎಂದಿದ್ದಾರೆ. ಒಟ್ಟು 12 ಎಕರೆ ಸರಕಾರಿ ಜಾಗವನ್ನು ಹಲವರು ಒತ್ತುವರಿ ಮಾಡಿದ್ದು ಇದನ್ನು ತೆರವು ಗೊಳಿಸಬೇಕಾಗಿದೆ. ವಸತಿಹೀನರಿಗೆ ಈ ಜಮೀನನ್ನು ನೀಡಲು ಕ್ರಮಕೈಗೊಳ್ಳು ವಂತೆ ಅವರು ಸ್ಥಳೀಯ ಆಡಳಿತವನ್ನು ಕೋರಿದ್ದಾರೆ.