ಮಡಿಕೇರಿ, ಏ. 18: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ದೈನಂದಿನ ಬೆಳವಣಿಗೆಗಳನ್ನು ಪ್ರತಿನಿತ್ಯ ವರದಿ ನೀಡುವ ಮೂಲಕ ಕೆಳ ಹಂತದ ಅಧಿಕಾರಿಗಳು ಜಾಗೃತೆಯಿಂದ ಕರ್ತವ್ಯ ನಿರ್ವಹಿಸುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜನೆಗೊಂಡಿರುವ ಚುನಾವಣಾ ವೆಚ್ಚ ವೀಕ್ಷಕರಾದ ಜೈಕುಮಾರ್ ಮೀನಾ ಸಂಬಂಧಪಟ್ಟ ವರದಿಗೆ ನಿರ್ದೇಶಿಸಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಜಿಲ್ಲೆಗೆ ಆಗಮಿಸಿದ ಅಧಿಕಾರಿ ಮೀನಾ ಅವರು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಬಂಧಿಸಿದ ಖರ್ಚು ವೆಚ್ಚಗಳ ಹೊಣೆಗಾರಿಕೆ ಹೊತ್ತಿರುವ ಕೆಳಹಂತದ ಅಧಿಕಾರಿಗಳ ದೈನಂದಿನ ಕೆಲಸ ಕಾರ್ಯಗಳನ್ನು ಸೂಕ್ಷ್ಮವಾಗಿ ಅವಲೋಕನ ನಡೆಸಿದರು.
ಅಲ್ಲದೆ ಪ್ರತಿನಿತ್ಯದ ಕೆಲಸ ಕಾರ್ಯಗಳನ್ನು ಸಂಬಂಧಿಸಿದ ಪ್ರತಿಯೊಬ್ಬರು ನಿಗಾವಹಿಸಿ ಆಸಕ್ತಿಯಿಂದ ನೋಡಿಕೊಳ್ಳಬೇಕೆಂದು ತಿಳಿ ಹೇಳಿದ ಅವರು, ಎಲ್ಲಿಯೂ ಆಯೋಗದ ನೀತಿ ನಿಯಮಗಳ ಉಲ್ಲಂಘನೆಯಾಗದಂತೆ ಗಮನಿಸುತ್ತಾ, ಸಂಪೂರ್ಣ ವಿವರವನ್ನು ವರದಿ ಮೂಲಕ ನೀಡಲು ಸೂಚಿಸಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲೆಗೆ ವೆಚ್ಚ ವೀಕ್ಷಕರಾಗಿ ಜೈಕುಮಾರ್ ಮೀನಾ ಅವರು ವರದಿ ಮಾಡಿಕೊಂಡಿದ್ದಾರೆ.
ಜೈಕುಮಾರ್ ಮೀನಾ ಅವರು ಮಹಾರಾಷ್ಟ್ರದಲ್ಲಿ ಭಾರತೀಯ ಕಂದಾಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು 9449847571 ಸಂಪರ್ಕಿಸ ಬಹುದಾಗಿದೆ.
ಸಮಿತಿ ಸಭೆ: ಕೇಂದ್ರ ಚುನಾವಣಾ ಆಯೋಗದಿಂದ ಜಿಲ್ಲೆಗೆ ಚುನಾವಣಾ ವೆಚ್ಚ ವೀಕ್ಷಕರಾಗಿ ನಿಯೋಜನೆ ಗೊಂಡಿರುವ ಮಹಾರಾಷ್ಟ್ರ ಐ.ಆರ್.ಎಸ್. ಅಧಿಕಾರಿ ಜೈಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ವೆಚ್ಚ ಕಣ್ಗಾವಲು ಸಮಿತಿ ಸಭೆಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಯಿತು. ಇಂದಿನ ಸಭೆಯಲ್ಲಿ ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ವಿಧಾನಸಭೆ ಚುನಾವಣೆ ಹಿನ್ನೆಲೆ ವೆಚ್ಚಕ್ಕೆ ಸಂಬಂಧಿಸಿದಂತೆ ನಿಯೋಜಿಸಿರುವ ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಅರಿತು ಕಾರ್ಯನಿರ್ವ ಹಿಸಬೇಕು. (ಮೊದಲ ಪುಟದಿಂದ) ಪ್ರತಿನಿತ್ಯ ಮಾಹಿತಿ ಪಡೆದುಕೊಳ್ಳಬೇಕು. ಹಾಗೆಯೇ ವರದಿ ನೀಡಬೇಕು ಎಂದು ಜೈಕುಮಾರ್ ಅವರು ಸಂಬಂಧಪಟ್ಟ ವೆಚ್ಚ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಧಾನಸಭಾ ಚುನಾವಣೆಯ ಪ್ರಾಮುಖ್ಯತೆ ಮತ್ತು ಮಹತ್ವ ಅರಿತು ಕಾರ್ಯನಿರ್ವಹಿಸಬೇಕು. ಎಲ್ಲಾ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ತೃಪ್ತಿದಾಯಕವಾಗಿ ಕೆಲಸ ನಿರ್ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು ಸ್ಪಷ್ಟ ಸೂಚನೆ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಮೇಶ್ ಪಿ. ಕೊನರೆಡ್ಡಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ. ರಾಜು ಅವರು ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಚುನಾವಣೆ ವೆಚ್ಚ ನಿರ್ವಹಣಾಧಿಕಾರಿ ನಂದ, ಸಹಾಯಕ ವೆಚ್ಚ ನಿರ್ವಹಣಾಧಿಕಾರಿ ಶ್ರೀಧರಮೂರ್ತಿ, ಆದಾಯ ತೆರಿಗೆ ಇಲಾಕೆ ಅಧಿಕಾರಿ ರಮೇಶ್, ನೋಡಲ್ ಅಧಿಕಾರಿ ಪ್ರಮೋದ್, ಇತರರು ಇದ್ದರು.