ಗೋಣಿಕೊಪ್ಪಲು. ಏ. 18: ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕೊಡಗು ಜಿಲ್ಲೆಗೆ ಆಗಮಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಟ್ಟಂಗಾಲ ಸಮೀಪದ ಖಾಸಗಿ ರೆಸಾರ್ಟ್‍ವೊಂದರಲ್ಲಿ ತಂಗಿದ್ದ ಸಂದರ್ಭ ‘ಶಕ್ತಿ’ಗೆ ವಿಶೇಷ ಸಂದರ್ಶನ ನೀಡಿದರು.

‘ಶಕ್ತಿ’: ನೀವು ಮುಂದಿನ ಚುನಾವಣೆಯಲ್ಲಿ ಕಿಂಗ್ ಮೇಕರ್ಸ್ ಎಂಬ ಮಾತಿದೆ ಇದರ ಬಗ್ಗೆ ನಿಮ್ಮ ಉತ್ತರವೇನು.?

ಕುಮಾರಸ್ವಾಮಿ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವದು ಸ್ಪಷ್ಟವಾಗಿದೆ. ರಾಜ್ಯದ ಎಲ್ಲಾ ಭಾಗದಲ್ಲೂ ಪಕ್ಷಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ರಾಷ್ಟ್ರೀಯ ಪಕ್ಷಗಳ ಸರ್ಕಾರ ಜನತೆ ನೋಡಿ ಭ್ರಮನಿರಸನಗೊಂಡಿದ್ದಾರೆ. ನಾವು ಮುಂದಿನ ಚುನಾವಣೆಯಲ್ಲಿ ಕಿಂಗ್ ಮೇಕರ್ಸ್ ಆಗುವುದಿಲ್ಲ. ನಾವೇ ಕಿಂಗ್ ಆಗ್ತೇವೆ.

‘ಶಕ್ತಿ’: ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಮೊದಲೇ ಪ್ರಕಟಿಸಲು ಕಾರಣವೇನು.?

ಕುಮಾರಸ್ವಾಮಿ: ರಾಜ್ಯದ 126 ಕ್ಷೇತ್ರಗಳಲ್ಲಿ ಗೊಂದಲವಿಲ್ಲದ, ಗೆಲ್ಲುವ ಸೂಚನೆ ಇರುವ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು 40 ದಿನಗಳ ಮುಂಚೆಯೇ ಪ್ರಕಟಿಸಿದ್ದೇವೆ. ಇದರಿಂದ ಅಭ್ಯರ್ಥಿಗಳಿಗೆ ಮತದಾರರನ್ನು ತಲುಪಲು ಅವಕಾಶವಾಗಿದೆ. ಜಿಲ್ಲೆಯಲ್ಲಿಯೂ ಆ ನಿಟ್ಟಿನಲ್ಲಿ ಎರಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

‘ಶಕ್ತಿ’: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವ ಅಭಿಪ್ರಾಯವಿದೆಯೇ.?

ಕುಮಾರಸ್ವಾಮಿ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರು ನಮ್ಮ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ವಿಶೇಷ ವರದಿಯನ್ನು ತಾನು ತರಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಆರಂಭದಿಂದಲೂ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳೇ ಆರಿಸಿ ಬಂದಿದ್ದಾರೆ. ಈ ಬಾರಿ ಬದಲಾವಣೆಯ ಗಾಳಿ ಬೀಸಿರುವದರಿಂದ ಈ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಹೆಚ್ಚಾಗಿವೆ.

‘ಶಕ್ತಿ’: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ನಿಮ್ಮ ನಿಲುವೇನು.?

ಕುಮಾರಸ್ವಾಮಿ: ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಇರುವದು ಅರಿತ್ತಿದ್ದೇನೆ. ಈ ನಾಡಿನ ಪರಿಸರ, ಕಲೆ, ಸಂಸ್ಕøತಿ, ಆಚಾರ-ವಿಚಾರಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ವಿಶೇಷ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ.

‘ಶಕ್ತಿ’: ಜಿಲ್ಲೆಯ ಕಾಫಿ ಬೆಳೆಗಾರರ, ರೈತರ ಸಾಲ ಮನ್ನಾದ ಬಗ್ಗೆ ನಿಮ್ಮ ಅಭಿಪ್ರಾಯವೇನು.?

ಕುಮಾರಸ್ವಾಮಿ: ಕೊಡಗು ಜಿಲ್ಲೆಯಲ್ಲಿರುವ ಕಾಫಿ ಬೆಳೆಗಾರರ,ರೈತರ ಸಮಸ್ಯೆಗಳು ಇತ್ತೀಚಿನ ವರ್ಷದಲ್ಲಿ ಗಂಭೀರ ಸ್ವರೂಪ ಪಡೆದಿವೆ. ನಿರೀಕ್ಷಿತ ಬೆಳೆಗಳು ರೈತನ ಕೈ ಸೇರಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇದನ್ನು ಮನಗಂಡು ಒಂದೇ ಒಂದು ಬಾರಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಈ ಹಿಂದೆಯೇ ಕಾಫಿ ಬೆಳೆಗಾರ ಮುಖಂಡರು ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವದರಿಂದ ಸಮಸ್ಯೆ ನೀಗಲಿದೆ. ಆದ್ದರಿಂದ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ, ಕಾಫಿ ಬೆಳೆಗಾರರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ.

‘ಶಕ್ತಿ’; ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ಇದು ದೊಡ್ಡ ಹೊರೆಯಾಗುವದಿಲ್ಲವೇ.?

ಕುಮಾರಸ್ವಾಮಿ: ಸಾಲ ಮನ್ನಾ ಮಾಡುವದರಿಂದ ಸ್ವಲ್ಪ ಪ್ರಮಾಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಇದನ್ನು ತಪ್ಪಿಸಲು ವಿವಿಧ ಮೂಲಗಳಿಂದ ಹಣ ಕ್ರೋಢಿಕರಣ ಮಾಡಲಾಗುವದು. ರೈತರ ಸಾಲದೊಂದಿಗೆ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರ ಸಾಲವನ್ನು ಕೂಡ ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲಿ ಮನ್ನಾ ಮಾಡುತ್ತೇನೆ.

‘ಶಕ್ತಿ’: ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಹೊಸ ತಾಲೂಕು ರಚನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.?

ಕುಮಾರಸ್ವಾಮಿ: ನನ್ನ 20 ತಿಂಗಳ ಅವಧಿಯಲ್ಲಿ ಹಲವು ಹೊಸ ತಾಲೂಕುಗಳನ್ನು ರಚಿಸಲಾಗಿದೆ. ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಹೊಸ ತಾಲೂಕು ರಚನೆಗೆ ಎಲ್ಲಾ ಅವಕಾಶಗಳು ಲಭ್ಯವಿರುವದರಿಂದ ಅಧಿಕಾರಕ್ಕೆ ಬಂದ ನಂತರ ಮೊದಲ ಆದ್ಯತೆಯಾಗಿ ಪೊನ್ನಂಪೇಟೆ ತಾಲೂಕು ರಚನೆಗೆ ಶಿಫಾರಸ್ಸು ಮಾಡುತ್ತೇನೆ.

‘ಶಕ್ತಿ’: ಈ ಹಿಂದೆ ಪಕ್ಷದಲ್ಲಿದ್ದು ಅಧಿಕಾರ ನಡೆಸಿ ಇದೀಗ ಪಕ್ಷಾಂತರ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯ.?

ಕುಮಾರಸ್ವಾಮಿ: ಪಕ್ಷ ಅಧಿಕಾರದಲ್ಲಿದ್ದ ಸಂದರ್ಭ ಕೊಡಗು ಜಿಲ್ಲೆಯ ಜನತೆಗೆ ಅನುಕೂಲವಾಗಲು ಅಧಿಕಾರದೊಂದಿಗೆ ಮಂತ್ರಿ ಗಿರಿಯನ್ನು ನೀಡಿದ್ದೇವೆ. ಮಂತ್ರಿ ಮಂಡಲದಲ್ಲಿ ಬಹುದೊಡ್ಡ ಜವಾಬ್ದಾರಿ ಯನ್ನು ನೀಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಇವರು ಸತತ ವಿಫಲರಾಗಿರುವದು ನಮ್ಮ ಗಮನಕ್ಕೆ ಬರಲು ಹಲವು ವರ್ಷಗಳೇ ಬೇಕಾಯಿತು. ಇದೀಗ ಕೊಡಗು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಕೊಡಗು ಜಿಲ್ಲೆಗೂ ಕೂಡ ಉತ್ತಮ ಸ್ಥಾನಮಾನ ನೀಡುತ್ತೇವೆ.

‘ಶಕ್ತಿ’: ಆನೆ-ಮಾನವ ಸಂಘರ್ಷದ ಬಗ್ಗೆ ಏನನ್ನುತ್ತೀರಿ.?

ಕುಮಾರಸ್ವಾಮಿ: ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷದಿಂದ ಹಲವು ಅಮೂಲ್ಯ ಜೀವಗಳನ್ನು ನಾವುಗಳು ಕಳೆದುಕೊಂಡಿದ್ದೇವೆ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮ ಅಭ್ಯರ್ಥಿ ಸಂಕೇತ್ ಪೂವಯ್ಯ ಈ ಬಗ್ಗೆ ನಿರಂತರ ಹೋರಾಟ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಜಿಲ್ಲೆಯ ಪ್ರಮುಖ ಹೋರಾಟಗಾರರೊಂದಿಗೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.

‘ಶಕ್ತಿ’: ಟಿಪ್ಪು ಜಯಂತಿಯ ಬಗ್ಗೆ ನಿಮ್ಮ ಅಭಿಪ್ರಾಯ.?

ಕುಮಾರಸ್ವಾಮಿ: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಯಾರ ಒತ್ತಡವೂ ಇರಲಿಲ್ಲ ಇಲ್ಲಿಯ ಹಿಂದೂ,ಮುಸ್ಲಿಂ ಬಾಂಧವರ ಸಾಮರಸ್ಯವನ್ನು ಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಜಯಂತಿ ಆಚರಣೆಗೆ ಮುಂದಾಯಿತು. ಪರಿಣಾಮ 144 ಸೆಕ್ಷನ್ ಜಾರಿಗೆ ತಂದು ಜಯಂತಿ ಆಚರಣೆ ನಡೆಸಿದೆ. ಇದರಿಂದ ಪ್ರಯೋಜನವಾಗಲಿಲ್ಲ.

‘ಶಕ್ತಿ’: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ನಿಮ್ಮ ನಡೆ.?

ಕುಮಾರಸ್ವಾಮಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಆರಂಭದಿಂದಲೂ ಈ ಹೋರಾಟದಲ್ಲಿ ಪಕ್ಷ ತೊಡಗಿಸಿಕೊಂಡಿದೆ. ತಾರ್ಕಿಕ ಅಂತ್ಯದವರೆಗೂ ಹೋರಾಟ ನಡೆಸಿದೆ. ಮುಂದೆ ಇದರಲ್ಲಿ ನ್ಯಾಯಾ ಸಿಗುವ ಸಾಧ್ಯತೆ ಇದೆ.

‘ಶಕ್ತಿ’: ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಗೊಂದಲ ಜೆಡಿಎಸ್‍ಗೆ ಅನುಕೂಲವಿದೆಯೇ.?

ಕುಮಾರಸ್ವಾಮಿ: ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಗೊಂದಲದಿಂದ ಸಹಜವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಿದೆ. ಹಾಗಂತ ನಾವು ಸುಮ್ಮನೆ ಕೂರುವವರಲ್ಲ. ನಮ್ಮ 20 ತಿಂಗಳ ಕಾರ್ಯಕ್ರಮವನ್ನು ಮತದಾರರ ಮನೆ ಮನೆಗೆ ತಲುಪಿಸುವ ಮೂಲಕ ಇದೊಂದು ಬಾರಿ ನಮಗೆ ಅವಕಾಶ ನೀಡಿ ಎಂದು ಮತದಾರರಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ.

‘ಶಕ್ತಿ’: ಪ್ರಚಾರಕ್ಕೆ ಮತ್ತೊಮ್ಮೆ ಜಿಲ್ಲೆಗೆ ಬರುವ ಸಾಧ್ಯತೆ ಇದೆಯೇ.?

ಕುಮಾರಸ್ವಾಮಿ: ಈಗಾಗಲೇ ರಾಜ್ಯದ ಎಲ್ಲಾ ಭಾಗದಲ್ಲೂ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ. ತೀರಾ ಅನಾರೋಗ್ಯವಿದ್ದರೂ ಪ್ರಚಾರಕ್ಕೆ ಒತ್ತು ನೀಡಿದ್ದೇನೆ. ಕೊಡಗಿನಲ್ಲಿ ಪಕ್ಷಕ್ಕೆ ಅನುಕೂಲಕರವಾದ ವಾತಾವರಣವಿದೆ. ಇನ್ನೊಂದು ಬಾರಿ ಪ್ರಚಾರ ಸಭೆಗೆ ಆಗಮಿಸಿ ಮತ ಯಾಚಿಸಲು ಬರುತ್ತೇನೆ.

- ಹೆಚ್.ಕೆ. ಜಗದೀಶ್