ಮಡಿಕೇರಿ, ಏ. 18: ಬಿಜೆಪಿಯಿಂದ ಮಡಿಕೇರಿ ಕ್ಷೇತ್ರ ಹಾಗೂ ಕಾಂಗ್ರೆಸ್‍ನಿಂದ ವೀರಾಜಪೇಟೆ ಕ್ಷೇತ್ರಕ್ಕೆ ಅಭ್ಯರ್ಥಿಗಳ ನಾಮಪತ್ರಕ್ಕೆ ಅಧಿಕೃತ ಮುದ್ರೆ ಹಾಕಲಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಬಿಜೆಪಿ ವರಿಷ್ಠ ಮಂಡಳಿ ಅಧಿಕೃತವಾಗಿ ‘ಬಿ’ ಫಾರ್ಮ್ ನೀಡಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸಿ.ಎಸ್. ಅರುಣ್ ಮಾಚಯ್ಯ ಆವರಿಗೆ ಕಾಂಗ್ರೆಸ್ ವರಿಷ್ಠ ಮಂಡಳಿ ಅಧಿಕೃತ ‘ಬಿ’ ಫಾರ್ಮ್ ನೀಡಿದೆ.

ಈ ನಡುವೆ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ವೀರಾಜಪೇಟೆ ಕ್ಷೇತ್ರದಿಂದ ಟಿಕೆಟ್ ಸಿಗದಿರುವದಕ್ಕೆ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ, ಸಚಿವ ಎಂ.ಆರ್. ಸೀತಾರಾಂ ಅವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಬೆಂಬಲಿಗರು ಮುಖ್ಯ ಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಮಡಿಕೇರಿ ಕ್ಷೇತ್ರದ ಘೋಷಿತ ಅಭ್ಯರ್ಥಿ ಹೆಚ್.ಎಸ್. ಚಂದ್ರಮೌಳಿ ಅವರು ಇಂದು ಕಾಂಗ್ರೆಸ್ ವರಿಷ್ಠ ಮಂಡಳಿಗೆ ವಿವರಣಾ ಪತ್ರವೊಂದನ್ನು ನೀಡಿದ್ದಾರೆ.

ರಂಜನ್ ನಾಮಪತ್ರ

ಮಡಿಕೇರಿ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಈ ಬಾರಿ ಪಕ್ಷ ಪ್ರಕಟಿಸಿರುವ ಪ್ರಥಮ ಪಟ್ಟಿಯಲ್ಲೇ ಅವಕಾಶ ಪಡೆದುಕೊಂಡಿರುವ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಪಕ್ಷದ ‘ಬಿ’ ಫಾರಂ ಕೂಡ ಲಭ್ಯವಾಗಿದೆ. ತಾ. 20ರಂದು ಅಪರಾಹ್ನ 12.15ಕ್ಕೆ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾವು ನಾಮಪತ್ರ ಸಲ್ಲಿಸುತ್ತಿರುವದಾಗಿ ಅಪ್ಪಚ್ಚುರಂಜನ್ ಅವರು ತಿಳಿಸಿದ್ದಾರೆ.

ಅರುಣ್ ನಾಮಪತ್ರ

ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರಿಗೆ ಇಂದು ಪಕ್ಷದಿಂದ ‘ಬಿ’ ಫಾರ್ಮ್ ಲಭ್ಯವಾಗಿದೆ. ತಾ. 23ರಂದು ವೀರಾಜಪೇಟೆಯಲ್ಲಿ ತಾವು ನಾಮಪತ್ರ ಸಲ್ಲಿಸಲಿರುವದಾಗಿ ಅರುಣ್ ಮಾಚಯ್ಯ ಅವರು ತಿಳಿಸಿದ್ದಾರೆ.

ಬಂಡಾಯ ಅಭ್ಯರ್ಥಿಯಾಗಿ ಪದ್ಮಿನಿ

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಳ್ಳಹಿಡಿದಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿ, ಚುನಾವಣೆಗೆ ತಾನು ವೇದಿಕೆ ಸಿದ್ಧಗೊಳಿಸಿರುವಾಗ ಅನ್ಯಾಯ ಮಾಡಿದ್ದು, ತಾ.23ರೊಳಗೆ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವೆ ಎಂದು ಕರ್ನಾಟಕ ಅರಣ್ಯ ನಿಗಮ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಘೋಷಿಸಿದ್ದಾರೆ.

ಈಗಾಗಲೇ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಪಕ್ಷಕ್ಕೆ ಅನ್ಯಾಯ ಮಾಡಿರುವ ವ್ಯಕ್ತಿಗೆ ಈ ಬಾರಿ ಟಿಕೆಟ್ ನೀಡಲಾಗಿದ್ದು, ಈ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳಿಗೆ ಪಕ್ಷದ ಕಾರ್ಯಕರ್ತರ ಕೂಗು ಕೇಳಿಸಲಿಲ್ಲ ವೆಂದು ಪದ್ಮಿನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಿರಂತರವಾಗಿ ತಾನು ಪಕ್ಷಕ್ಕೆ ದುಡಿಯುತ್ತಾ ಬಂದಿದ್ದು, ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜು ಗೊಳಿಸಿದ್ದಾಗಿ ಪುನರುಚ್ಚರಿಸಿದ ಅವರು, ಕ್ಷೇತ್ರದ ಜನತೆಯ ಅಭಿಪ್ರಾಯದಂತೆ ತಾನೇ ಕಾಂಗ್ರೆಸ್‍ನ ನಿಜವಾದ ಅಭ್ಯರ್ಥಿಯೆಂದು ಸಮರ್ಥಿಸಿಕೊಂಡರು. ಕಾರ್ಯಕರ್ತರ ಒತ್ತಾಯದಿಂದ ತಾನು ಸ್ಪರ್ಧೆ ಗಿಳಿಯುತ್ತಿದ್ದು, ಯಾವದೇ ದಿನಾಂಕ ದಂದು ತಾ. 23ರೊಳಗೆ ನಾಮಪತ್ರ ಸಲ್ಲಿಸುವದಾಗಿ ಸ್ಪಷ್ಟಪಡಿಸಿದರು.

ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವದರೊಂದಿಗೆ ಸ್ಪರ್ಧೆಗಿಳಿದು ಗೆಲುವು ಸಾಧಿಸುವದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ವರಿಷ್ಠರಿಗೆ

(ಮೊದಲ ಪುಟದಿಂದ) ನಿಷ್ಠಾವಂತ ಕಾರ್ಯಕರ್ತರ ನೋವು ಅರ್ಥವಾಗುತ್ತಿಲ್ಲವೆಂದು ವಿಷಾದಿಸಿ ದರು.

ಚಂದ್ರಮೌಳಿ ಹೇಳಿಕೆ

ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಸ್. ಚಂದ್ರಮೌಳಿ ಅವರು ಸ್ಪಷ್ಟ ಹೇಳಿಕೆ ನೀಡಿ, ಇಂದಿನ ‘ಶಕ್ತಿ’ಯಲ್ಲಿ ವಾಸ್ತವ ವರದಿ ಬಂದಿದ್ದು, ವರಿಷ್ಠರಿಂದ ತನಗೆ ಬುಲಾವ್ ಬಂದಿದ್ದರೂ ಯಾವದೇ ಬದಲಾವಣೆಯ ತೀರ್ಮಾನ ತೆಗೆದು ಕೊಂಡಿಲ್ಲವೆಂದು ವಿವರಿಸಿ ದ್ದಾರೆ. ಈಗಾಗಲೇ ತಾನು ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿರುವ ಕುರಿತು ವರಿಷ್ಠರಿಗೆ ಸಮಜಾಯಿಷಿಕೆ ನೀಡಿದ್ದು, ಯಾವ ನಿರ್ಧಾರವೂ ಹೊರಬಿದ್ದಿಲ್ಲ ವೆಂದು ಸ್ಪಷ್ಟಪಡಿಸಿದರು. ಬದಲಾಗಿ ತನಗೇ ಟಿಕೆಟ್‍ನೊಂದಿಗೆ ಉಮೇದು ವಾರಿಕೆ ಮುಂದುವರಿಸುವ ವಿಶ್ವಾಸವಿದೆ ಯೆಂದು ಮಾರ್ನುಡಿದರು.

ಇಂದು ತಾನು ಕಾಂಗ್ರೆಸ್ ವೀಕ್ಷಕರಾದ ವೇಣುಗೋಪಾಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇವರು ಗಳನ್ನು ಭೇಟಿಯಾಗಿ ಮೆಹೂಲ್ ಚೋಕ್ಸಿ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದ ಆಕಸ್ಮಿಕ ಸಂದರ್ಭದ ಬಗ್ಗೆ ಲಿಖಿತ ವಿವರಣೆ ನೀಡಿದ್ದೇನೆ. ಇದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದೇನೆ. ತನ್ನ ವಿವರಣೆಯನ್ನು ಎಐಸಿಸಿಗೆ ಕಳುಹಿಸುವದಾಗಿ ವರಿಷ್ಠರು ತಿಳಿಸಿದ್ದಾರೆ. ಗುರುವಾರ ದಿನ ನಿರ್ಧಾರ ಹೊರಬೀಳಬಹುದು. ವರಿಷ್ಠರಿಗೆ ಮನವರಿಕೆಯಾಗದಿದ್ದಲ್ಲಿ ತನ್ನ ಈ ಪತ್ರವನ್ನೇ ಸ್ಪರ್ಧೆಯಿಂದ ಹಿಂತೆಗೆದಿದ್ದೇನೆ ಎಂದು ಪರಿಗಣಿಸುವಷ್ಟು ಸ್ವಾತಂತ್ರ್ಯ ವರಿಷ್ಠ ಮಂಡಳಿಗಿದೆ ಎಂದು ತನ್ನ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿರುವದಾಗಿ ಚಂದ್ರಮೌಳಿ ಮಾಹಿತಿಯಿತ್ತಿದ್ದಾರೆ.

ಮುತ್ತಪ್ಪ ಪ್ರತಿಕ್ರಿಯೆ

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಪಂಡ ಎಂ. ಮುತ್ತಪ್ಪ ಪ್ರತಿಕ್ರಿಯೆ ನೀಡಿ ಅಭ್ಯರ್ಥಿ ಚಂದ್ರಮೌಳಿ ಅವರಿಗೆ ಟಿಕೆಟ್ ರದ್ದಾಗಿಲ್ಲವೆಂದೂ, ಕಾಂಗ್ರೆಸ್ ವರಿಷ್ಠರೊಂದಿಗೆ ಕೆಲವರು ಮಾತುಕತೆಯಲ್ಲಿ ತೊಡಗಿದ್ದಾರಷ್ಟೇ ಎಂದು ಸುಳಿವು ನೀಡಿದರು. ಅದೇ ರೀತಿ ತಾನು ಕೂಡ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಜತೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಎಲ್ಲವನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸತೊಡಗಿರುವದಾಗಿ ವಿವರಿಸಿದರು.

‘ಶಕ್ತಿ’ಗೆ ಮೂಲವೊಂದರಿಂದ ತಿಳಿದುಬಂದಂತೆ ಮುತ್ತಪ್ಪ ಅವರಿಗೆ ಕೆಪಿಸಿಸಿಯಲ್ಲಿ ಕಾರ್ಯದರ್ಶಿ ಸ್ಥಾನ ಕಲ್ಪಿಸುವ ಭರವಸೆ ದೊರೆತಿದ್ದು, ಅವರು ಪಕ್ಷೇತರವಾಗಿ ಸ್ಪರ್ಧಿಸದಂತೆ ಮನ ವೊಲಿಸುವ ಯತ್ನ ನಡೆದಿರುವದಾಗಿ ತಿಳಿದುಬಂದಿದೆ.

ಭಾರ್ಗವ ನಾಮಪತ್ರ

ಈ ನಡುವೆ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಹಿಂದೂ ಮಹಾಸಭಾ ಅಭ್ಯರ್ಥಿಯಾಗಿ ತಾ. 21ರಂದು ತಾನು ನಾಮಪತ್ರ ಸಲ್ಲಿಸುವದಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಚೆರಿಯಮನೆ ಜೆ. ಭಾರ್ಗವ ‘ಶಕ್ತಿ’ಯೊಂದಿಗೆ ಖಚಿತ ಪಡಿಸಿದ್ದಾರೆ. ಹಿಂದೂ ಸಮಾಜದ ಯುವಕರ ಪರವಾಗಿ ಪಕ್ಷದಿಂದ ಸ್ಪರ್ಧೆಗಿಳಿಯುವಂತೆ ವರಿಷ್ಠರು ಸೂಚಿಸಿರುವ ಮೇರೆಗೆ ಚುನಾವಣಾ ಅಖಾಡಕ್ಕಿಳಿ ಯುತ್ತಿರುವದಾಗಿ ತಿಳಿಸಿದರು.

ರಾಜಕೀಯವಾಗಿ ಹಿಂದೂಗಳ ಶೋಷಣೆ ವಿರುದ್ಧದ ದನಿಯಾಗಿ ಸ್ಪರ್ಧಿಸುತ್ತಿದ್ದು, ವ್ಯಾಪಕ ಕಾರ್ಯಕರ್ತರ ಬೆಂಬಲ ಲಭಿಸಿದೆ ಎಂದು ಸ್ಪಷ್ಟಪಡಿಸಿದರು. ತಾನು ಓರ್ವ ಪದವೀಧರನಾಗಿದ್ದು, ಹಿಂದೂ ಸಂಘಟನೆಗಳ ಒಡನಾಟದಲ್ಲಿ ವಿದ್ಯಾರ್ಥಿ ಜೀವನದಿಂದ ಬೆಳೆದು ಬಂದಿರುವೆ ಎಂದು ಭಾರ್ಗವ ಅಭಿಪ್ರಾಯಪಟ್ಟರು. ಬೇರೆಯವರು ಹಿಂದುತ್ವವನ್ನು ಚುನಾವಣೆಗಾಗಿ ಬಳಸಿ ಕೊಂಡರೆ, ಹಿಂದೂ ಮಹಾಸಭಾ ದಿಂದ ಹಿಂದುತ್ವಕ್ಕಾಗಿಯೇ ರಾಜಕೀಯ ಮಾಡಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಹಿಂದೂ ಮಹಾಸಭಾ ಸ್ಪರ್ಧೆಯೊಂದಿಗೆ ಹಿಂದುತ್ವವನ್ನು ಗುರುತಿಸುವ ಅಥವಾ ಸಮಾಜ ಮಾನ್ಯಮಾಡಬೇಕೆಂಬ ಆಶಯದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ತೀರ್ಮಾನ ತೆಗೆದುಕೊಂಡಿದ್ದು, ಮಡಿಕೇರಿ ಸೇರಿದಂತೆ ರಾಜ್ಯದಲ್ಲಿ 40ಕ್ಕೂ ಅಧಿಕ ಕಡೆ ಸ್ಪರ್ಧೆ ಮಾಡುತ್ತಿರುವದಾಗಿ ವಿವರಿಸಿದರು.

ಕೇವಲ ವದಂತಿ- ವಿರೂಪಾಕ್ಷಪ್ಪ

ಕಾಂಗ್ರೆಸ್‍ನ ಟಿಕೆಟ್ ಆಕಾಂಕ್ಷಿಯಾಗಿರುವ ವಿರೂಪಾಕ್ಷಪ್ಪ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಹೆಚ್.ಎಸ್. ಚಂದ್ರಮೌಳಿ ಅವರ ಟಿಕೆಟ್ ತಡೆಹಿಡಿಯಲ್ಪಟ್ಟಿರುವದು ವಾಸ್ತವವಾಗಿದ್ದು, ಮಿಕ್ಕೆಲ್ಲವೂ ಕೇವಲ ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದರು. ತಾನು ಸೇರಿದಂತೆ ಯಾರೊಬ್ಬರೂ ಕೂಡ ಚಂದ್ರಮೌಳಿ ಅವರ ಟಿಕೆಟ್ ರದ್ದಾಗದೆ ಪ್ರಯತ್ನಿಸುವದರಲ್ಲಿ ಯಾವದೇ ಅರ್ಥವಿಲ್ಲವೆಂದು ಸಮಜಾಯಿಸಿಕೆ ನೀಡಿದರು.

ಈಗಾಗಲೇ ಕಾಂಗ್ರೆಸ್ ವರಿಷ್ಠರು ಚಂದ್ರಮೌಳಿ ಅವರಿಗೆ ಪ್ರಕಟಿಸಿರುವ ಟಿಕೆಟ್ ಅನ್ನು ಒಂದು ವೇಳೆ ರದ್ದುಪಡಿಸಿದರೆ ಮಾತ್ರ ತಾವು ಮರು ಪ್ರಯತ್ನಿಸುವದರಲ್ಲಿ ಅರ್ಥವಿದ್ದು, ಈಗಿನ ಪರಿಸ್ಥಿತಿಯಲ್ಲಿ ತನ್ನನ್ನೂ ಸೇರಿದಂತೆ ದೃಶ್ಯಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಶುದ್ಧ ಸುಳ್ಳಿನಿಂದ ಕೂಡಿದೆ ಎಂದು ವಿರೂಪಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಸಕ್ತ ಚಂದ್ರಮೌಳಿ ಅವರೇ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ವಿಷಯವೊಂದರ ಸಂಬಂಧ ವರಿಷ್ಠರು, ಚಂದ್ರಮೌಳಿ ಬಳಿ ಸಮಜಾಯಿಷಿಕೆ ಕೇಳಿದ್ದು, ಯಾವದೇ ಬದಲಾವಣೆ ನಿರ್ಧಾರ ಕೈಗೊಂಡಿಲ್ಲವೆಂದು ವಿವರಿಸಿದರು.

ಕೇಂದ್ರ ಸಚಿವರ ಭೇಟಿ

ಕೊಡಗು ಜಿಲ್ಲೆಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕೇಂದ್ರ ಸಚಿವರಾದ ಮಾನೀಷ್ ಲಕ್ಷ್ಮೀಭಾಯ್ ಮಾಂಡವ್ಯ ಅವರು ಭೇಟಿ ನೀಡಿದ್ದು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಮುಖರ ವೈಯಕ್ತಿಕ ಭೇಟಿ ಯಲ್ಲಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಕಾರ್ಯಕರ್ತರ ಭೇಟಿ ನಿರತರಾಗಿರುವ ಸಚಿವರು, ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜೀ ವಿಧಾನಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಮೇಲ್ಮನೆ ಸದಸ್ಯ ಎಂ.ಪಿ. ಸುಬ್ರಮಣಿ ಮೊದಲಾದವ ರೊಂದಿಗೆ ಚುನಾವಣಾ ಕಾರ್ಯತಂತ್ರ ಕುರಿತು ಸಮಾಲೋಚನೆ ನಡೆಸಿರುವ ರೆಂದು ಗೊತ್ತಾಗಿದೆ.

ಅಲ್ಲದೆ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರನ್ನು ಸಂಪರ್ಕಿಸಿರುವ ಸಚಿವರು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಪಕ್ಷ ಉಳಿಸಿಕೊಂಡು ಎರಡು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರ ಭೇಟಿ ವೇಳೆ ಹುರಿದುಂಬಿಸಿದರೆಂದು ಗೊತ್ತಾಗಿದೆ.

ಸಚಿವರ ಭೇಟಿ ವೇಳೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಕಾರ್ಯದರ್ಶಿ ರಾಬಿನ್ ದೇವಯ್ಯ ಸೇರಿದಂತೆ ಇತರ ಪ್ರಮುಖರು ಹಾಜರಿದ್ದು, ಸಚಿವ ರೊಂದಿಗೆ ಸಮಾಲೋಚನೆ ನಡೆಸಿದ್ದಾಗಿ ಗೊತ್ತಾಗಿದೆ.

ಹರೀಶ್ ಬೋಪಣ್ಣ - ಸಿ.ಎಂ ಭೇಟಿ

ಶ್ರೀಮಂಗಲ: ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಸಹಿತ ಅವರ ನೂರಾರು ಬೆಂಬಲಿಗರು ಮೈಸೂರಿ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಹರೀಶ್ ಬೋಪಣ್ಣ ಅವರಿಗೆ ಟಿಕೆಟ್ ನೀಡದೆ, ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಟಿ.ಪ್ರದೀಪ್ ವಿರುದ್ಧ ಕೆಲಸ ಮಾಡಿದ ಚೆಪ್ಪುಡೀರ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಿ.ಎಂ. ಹರೀಶ್ ಬೋಪಣ್ಣ, ಹಾಗೂ ಅವರ ಬೆಂಬಲಿಗರಿಗೆ ದುಡುಕಿನ ಕ್ರಮಕೈಗೊಳ್ಳದಂತೆ ಹೇಳಿದ್ದು ಒಂದೆರಡು ದಿನದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗಿರುವ ಅರುಣ್ ಮಾಚಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ‘ಬಿ’ ಫಾರಂ ನೀಡಿದ್ದಾರೆ.

ಹರೀಶ್ ಬೋಪಣ್ಣ ಅವರ ಬಗ್ಗೆ ಬಿಜೆಪಿ ಮುಖಂಡರಲ್ಲಿಯೂ ಮೃದು ಧೋರಣೆ ಇದ್ದು, ಒಂದು ವೇಳೆ ಕಾಂಗ್ರೆಸ್‍ನಲ್ಲಿ ಅವಕಾಶ ವಂಚಿತ ರಾದರೆ ಬಿಜೆಪಿಗೆ ಸೆಳೆಯಲು ಕಾರ್ಯತಂತ್ರ ನಡೆಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಬಿಜೆಪಿಯಿಂದ ಟಿಕೆಟ್ ಪ್ರಬಲ ಆಕಾಂಕ್ಷಿ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಟಿಕೆಟ್ ಇನ್ನೂ ಖಾತ್ರಿಯಾಗದೇ ಇರುವದರಿಂದ, ಅವರಿಗೆ ಟಿಕೆಟ್ ಕೈತಪ್ಪಿದರೆ ಬಿಜೆಪಿಯಿಂದ ಹರೀಶ್ ಬೋಪಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಸಂಘಟನೆ ಯಲ್ಲಿ ಸಹಮತ ಇದೆ ಎನ್ನಲಾಗಿದೆ.

ಇನ್ನೊಂದು ಕಡೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದಲೂ ಬೆಂಬಲಿಗರು ಅವರಿಗೆ ಒತ್ತಾಯಿಸುತ್ತಿರುವದನ್ನು ಸ್ವತಃ ಹರೀಶ್ ಬೋಪಣ್ಣ ಅವರೇ ಖಚಿತಪಡಿಸಿ ದ್ದಾರೆ. ಇನ್ನೊಂದು ಕಡೆ ಪಕ್ಷಾಂತರ ಮಾಡುವ ಬಗ್ಗೆ ನಿರಾಕರಿಸಿದ್ದಾರೆ. ಇದರ ನಡುವೆ ಮೈಸೂರಿನ ಎಂಪೈರ್ ಹೊಟೇಲ್‍ನಲ್ಲಿ ಹರೀಶ್ ಬೋಪಣ್ಣ ಬೆಂಬಲಿಗರು ಸಭೆ ನಡೆಸಿದರು.

ಹರೀಶ್ ಬೋಪಣ್ಣ ಜಿಲ್ಲೆಗೆ ಉಸ್ತುವಾರಿ ಸಚಿವರ ಮೂಲಕ ಪಕ್ಷ ಭೇದ ರಹಿತವಾಗಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ತಂದಿದ್ದಾರೆ. ರಾಜಕೀಯ ಪ್ರಭಾವದಲ್ಲಿ ಜಿಲ್ಲೆಯ ಹಿತದೃಷ್ಟಿ ಅರಿತು ಕೆಲಸ ಮಾಡಿದ್ದಾರೆ. ತಮಗೆ ಅಧಿಕಾರ ಇಲ್ಲದಾಗಲೇ ಇಷ್ಟೊಂದು ಕೆಲಸ ಮಾಡಿದ್ದು, ಶಾಸಕರಾಗಿ ಆಡಳಿತ ನಡೆಸುವ ಸರ್ಕಾರದಲ್ಲಿದ್ದರೆ ಮತ್ತಷ್ಟು ಕೆಲಸವನ್ನು ಮಾಡುತ್ತಾರೆ. ಜಿಲ್ಲೆಯ ಬಗ್ಗೆ ಹರೀಶ್ ಬೋಪಣ್ಣ ಅಪಾರ ಕಾಳಜಿ, ದೂರದೃಷ್ಟಿ ಹೊಂದಿದ್ದಾರೆ ಎಂದು ಬೆಂಬಲಿಗರು ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಹರೀಶ್ ಬೋಪಣ್ಣ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲಿಗರು ಬದ್ಧವಾಗಿದ್ದು ಅವರ ನಡೆ ಕುತೂಹಲ ಮೂಡಿಸಿದೆ. ಇತ್ತ ವೀರಾಜಪೇಟೆ ಕ್ಷೇತ್ರ ಕಾಂಗ್ರೆಸ್‍ನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇನ್ನೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರಿಗೆ ಕಾಂಗ್ರೆಸ್‍ನಿಂದ ಮಲ್ಲೇಶ್ವರಂ ಕ್ಷೇತ್ರದ ಟಿಕೆಟ್ ನೀಡಿದ್ದು ತಮ್ಮ ಆಪ್ತ ಹರೀಶ್ ಬೋಪಣ್ಣ ಅವರಿಗೆ ವೀರಾಜಪೇಟೆ ಕ್ಷೇತ್ರದಲ್ಲಿ ಟಿಕೆಟ್ ನೀಡದೇ ಇರುವದಕ್ಕೆ ತಮ್ಮ ಟಿಕೆಟ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸುವ ಹೊಣೆ ತಮ್ಮದೆಂದು ಸಚಿವರು ಹೇಳಿದ್ದರು. ಆದರೆ, ಇದೀಗ ಬೇರೆಯವರಿಗೆ ಪಕ್ಷದಿಂದ ಟಿಕೆಟ್ ನೀಡಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವದಿಲ್ಲ ಎಂದು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅಸಮಾಧಾನ ವ್ಯಕ್ತ ಪಡಿಸಿರುವ ಬಗ್ಗೆ ಉನ್ನತ ಮೂಲಗಳು ತಿಳಿಸಿದೆ.