ಮಡಿಕೇರಿ, ಏ. 18: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಕಪ್ ಜಂಬರದ ಅಂಗವಾಗಿ ಇಂದು ಸಾಮಾಜಿಕ ಸೇವಾಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ರಕ್ತದಾನ, ನೇತ್ರ ತಪಾಸಣೆ, ಶ್ವಾಸಕೋಶ ಹಾಗೂ ರಕ್ತ ಪರೀಕ್ಷಾ ಶಿಬಿರ ಯಶಸ್ವಿಯಾಗಿ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಜನಾಂಗ ಬಾಂಧವರು ಹಾಗೂ ಸಾರ್ವಜನಿಕರು ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಯುವಕರು, ಯುವತಿಯರು ರಕ್ತದಾನ ಮಾಡಿದರು. ಮಕ್ಕಳಾದಿಯಾಗಿ ವಯೋವೃದ್ಧರು ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಗೆ ಒಳಗಾದರು. ಅಗತ್ಯವಿರುವವರಿಗೆ ಕನ್ನಡಕಕ್ಕೆ ಶಿಫಾರಸು ಮಾಡಲಾಯಿತು. ಶ್ವಾಸಕೋಶ ತೊಂದರೆಗೆ ಸಂಬಂಧಿಸಿದಂತೆ ಬಹುತೇಕ ಮಂದಿಗೆ ಪರೀಕ್ಷೆ ಹಾಗೂ ಇಸಿಜಿ ಮಾಡಿಸಲಾಯಿತು. ಶಿಬಿರಕ್ಕೆ ಆಗಮಿಸಿದವರು ಮಧುಮೇಹ ತಪಾಸಣೆ ಕೂಡ ಮಾಡಿಸಿಕೊಂಡರು.
ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ನೆರಿಯನ ನವೀನ್, ನೇತ್ರ ತಜ್ಞ ಡಾ. ಎಂ.ಜೆ. ವಿಕ್ರಂ, ನೇತ್ರಾಧಿಕಾರಿ ಕಾವ್ಯ, ಶ್ವಾಸಕೋಶ ತಜ್ಞ ಡಾ. ಚೆರಿಯಮನೆ ದೀಪಕ್ ಚಂಗಪ್ಪ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ, ಸುಶ್ರೂಶಕಿ ಯಶೋಧ ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸಿದರು.
ಕಾರ್ಯಕ್ರಮವನ್ನು ರೋಟರಿ ಮಿಸ್ಟಿಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್. ರವಿಶಂಕರ್ ಉದ್ಘಾಟಿಸಿ ದರು. ಈ ಸಂದರ್ಭ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಯುವ ವೇದಿಕೆ ನ್ಯಾಯಿಕ ಸಮಿತಿ ಅಧ್ಯಕ್ಷ, ಮಿಸ್ಟಿಹಿಲ್ಸ್ ವಲಯ ಅಧ್ಯಕ್ಷ ಕೊಟ್ಟಕೇರಿ ಯನ ದಯಾನಂದ, ಚೆರಿಯಮನೆ ಕ್ರಿಕೆಟ್ ಕಪ್ ಕಾರ್ಯದರ್ಶಿ ಮಾದಪ್ಪ ಇನ್ನಿತರರಿದ್ದರು.
ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್ ನಿರೂಪಿಸಿ, ಸ್ವಾಗತಿಸಿದರೆ, ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ವಂದಿಸಿದರು.