ಮಡಿಕೇರಿ, ಏ. 18: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಿಸಿದ ಸಾಂತ್ವನ ಮಹಿಳಾ ಸಹಾಯವಾಣಿಯಿಂದ ಕೊಡಗಿನಾದ್ಯಂತ ಸಮಾಜದಲ್ಲಿ ನೊಂದ ಮಹಿಳೆಯರಿಗೆ ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ, ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತ ಬಂದಿದೆ. ಆ ನಿಟ್ಟಿನಲ್ಲಿ ಸಾಂತ್ವನ ಕೇಂದ್ರದಲ್ಲಿ ಈವರೆಗೆ 3,244 ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, 3,214 ಪ್ರಕರಣಗಳು ಇತ್ಯರ್ಥಗೊಂಡಿವೆ.

2017-18ನೇ ಸಾಲಿನಲ್ಲಿ ಒಟ್ಟು 368 ಪ್ರಕರಣಗಳು ದಾಖಲಾಗಿ 338 ಪ್ರಕರಣಗಳು ಇತ್ಯರ್ಥಗೊಂಡಿವೆ. ಉಳಿದಂತೆ 30 ಪ್ರಕರಣಗಳು ಇತ್ಯರ್ಥದ ಹಂತದಲ್ಲಿವೆ. ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ. 6.48 ಲಕ್ಷಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಇಬ್ಬರು ಫಲಾನುಭವಿಗಳಿಗೆ 2017-18ನೇ ಸಾಲಿನಲ್ಲಿ ಕೊಡಿಸಲಾಗಿದೆ. ಆದ್ದರಿಂದ ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಾಂತ್ವನ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 1091 (ಬಿ.ಎಸ್.ಎನ್.ಎಲ್ ಸ್ಥಿರ ದೂರವಾಣಿ), 08272-229004 (ಕಚೇರಿ) ಸಂಪರ್ಕಿಸಬಹುದು.