ಸೋಮವಾರಪೇಟೆ, ಏ.18: ಜಗಜ್ಯೋತಿ ಬಸವಣ್ಣ ಅವರ ಜನ್ಮದಿನಾಚರಣೆಯನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆಚರಿಸಲಾಯಿತು. 12ನೇ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಗೆ ಜಾಗೃತಿ ಮೂಡಿಸಿದ ಬಸವೇಶ್ವರರ ಸ್ಮರಣೆ ಮಾಡಲಾಯಿತು.

ಬಿಜೆಪಿ ಕಚೇರಿಯಲ್ಲಿ: ಇಲ್ಲಿನ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಬಸವಜಯಂತಿ ಆಚರಿಸಲಾಯಿತು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

12ನೇ ಶತಮಾನದಲ್ಲಿಯೇ ಅಸಮಾನತೆಯ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಬಸವಣ್ಣನವರ ಆದರ್ಶಗಳ ಪಾಲನೆಯಾಗಬೇಕು. ಅಸ್ಪøಶ್ಯತೆ ವಿರುದ್ಧ ಪ್ರತಿಯೋರ್ವ ಪ್ರಜ್ಞಾವಂತರೂ ಹೋರಾಡಬೇಕು. ಸರ್ವರೂ ಸಮಾನರು ಎಂಬ ಧ್ಯೇಯ ಸಾಧನೆಗೆ ಶ್ರಮಿಸಬೇಕು ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಬಸವಣ್ಣನವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ವರ್ಗಾತೀತವಾಗಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ ಮಹಾನ್ ದಾರ್ಶನಿಕರ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ್ರಮುಖರಾದ ಉಷಾ ತೇಜಸ್ವಿ, ನಳಿನಿ ಗಣೇಶ್, ಸುಮಾ ಸುದೀಪ್, ಲೀಲಾ ನಿರ್ವಾಣಿ, ಕೊಮಾರಪ್ಪ, ಮನು ರೈ, ಸೋಮೇಶ್, ಶರತ್‍ಚಂದ್ರ, ಜೆ.ಸಿ. ಶೇಖರ್, ಎನ್.ಎಸ್. ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಪರಿಷತ್‍ನಿಂದ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಬಸವೇಶ್ವರರ 885ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ಕಕ್ಕೆಹೊಳೆ ಸಮೀಪವಿರುವ ಅಶ್ವಾರೂಢ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಈ ಸಂಧರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಕೊಡ್ಲಿಪೇಟೆ ಕಲ್ಲು ಮಠಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ|| ಚಿಟ್ಟಿಯಪ್ಪ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಪ.ಪಂ.ಮಾಜಿ ಅಧ್ಯಕ್ಷೆ ನಳಿನಿ ಗಣೇಶ್, ಮಾಜಿ ಉಪಾಧ್ಯಕ್ಷೆ ಶೀಲಾ ಡಿಸೋಜ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ ಅವರುಗಳು ಪುಷ್ಪ ನಮನ ಸಲ್ಲಿಸಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೆ ಬೇಲೂರು ನಿರ್ವಾಣಿ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶೀಲಾ, ಸಬ್ ಇನ್ಸ್‍ಪೆಕ್ಟರ್ ಶಿವಣ್ಣ, ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಡಿ.ಬಿ.ಸೋಮಪ್ಪ, ಪ್ರೇಮನಾಥ್, ಶಾಂಭಶಿವಮೂರ್ತಿ, ಲೋಕೇಶ್, ಶಿವಣ್ಣ, ನಿವೃತ್ತ ಪ್ರಾಧ್ಯಾಪಕರಾದ ಸಿ.ಎಂ.ಧರ್ಮಪ್ಪ, ಕಸಾಪ ಮಾಜಿ ಅಧ್ಯಕ್ಷ ಜವರಪ್ಪ, ಶನಿವಾರಸಂತೆ ಹೋಬಳಿ ಕ.ಸಾ.ಪ. ಅಧ್ಯಕ್ಷ ಸಿ.ಎಂ.ಪುಟ್ಟಸ್ವಾಮಿ, ಅರ್ಚಕರ ಸಂಘದ ಅಧ್ಯಕ್ಷ ಮೋಹನ್‍ಮೂರ್ತಿ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ಧರು.

ತಾಲೂಕು ಆಡಳಿತದಿಂದ: ತಾಲೂಕು ಆಡಳಿತ ವತಿಯಿಂದ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಸಿ.ಎಂ.ಧರ್ಮಪ್ಪ ಅವರು, ಬಸವೇಶ್ವರರ ತತ್ವ, ಆದರ್ಶಗಳ ಪಾಲನೆಯಿಂದ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ. ಚಿಟ್ಟಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೃತ್ತ ನಿರೀಕ್ಷಕ ನಂಜುಂಡೇಗೌಡ, ಸಬ್ ಇನ್ಸ್‍ಪೆಕ್ಟರ್ ಶಿವಣ್ಣ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಅಧಿಕಾರಿ ಶೀಲಾ ಪ್ರಾರ್ಥಿಸಿ, ತಾಲೂಕು ಕಛೇರಿ ಸಿಬ್ಬಂದಿ ಅರುಣ್ ಕುಮಾರ್ ಸ್ವಾಗತಿಸಿ ವಂದಿಸಿದರು.

ಬಸವೇಶ್ವರ ದೇವಾಲಯದಲ್ಲಿ: ಇಲ್ಲಿನ ವೀರಶೈವ ಸಮಾಜ, ಬಸವೇಶ್ವರ ಯುವಕ ಸಂಘದ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಬಸವಾದಿ ಶರಣರು ತಮ್ಮ ಇಡಿ ಜೀವನವನ್ನು ಸಮಾಜದ ಒಳಿತಿಗಾಗಿ ತ್ಯಾಗ ಮಾಡಿರುವದರಿಂದ ಇಂದಿಗೂ ಅವರನ್ನು ಸ್ಮರಣೆ ಮಾಡಿಕೊಳ್ಳಕೊಳ್ಳಲಾಗುತ್ತಿದೆ. ದೇವರು ಜ್ಞಾನವನ್ನು ಮಾನವನಿಗೆ ನೀಡಿದ್ದಾರೆ. ಜ್ಞಾನದ ಸದ್ಬಳಕೆಯಾಗಬೇಕು. ಶರಣರು ಜ್ಞಾನವನ್ನು ಪರರ ಕಲ್ಯಾಣಕ್ಕೆ ಮುಡುಪಾಗಿಟ್ಟಿದ್ದರು. ಈ ಕಾರಣದಿಂದ ಬಸವಾದಿ ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಚನ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ್, ವೀರಶೈವ ಸಮಾಜದ ಯಜಮಾನ ಕೆ.ಎನ್.ಶಿವಕುಮಾರ್, ವೀರಶೈವ ಸಮಾಜದ ಶೆಟ್ರು ಕೆ.ಎನ್.ತೇಜಸ್ವಿ, ಅಕ್ಕನ ಬಳಗ ಅಧ್ಯಕ್ಷೆ ಜಲಜಾ ಶೇಖರ್, ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಇದ್ದರು. ಸದಸ್ಯ ಕೆ.ಜೆ. ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.